ಬೆಂಗಳೂರು : ರಾಜ್ಯದಲ್ಲಿ ತೀವ್ರ ಸಂಚಲನ ಸೃಷ್ಟಿಸಿರುವ ಸ್ಟಿಂಗ್ ಆಪರೇಷನ್ ಪ್ರಕರಣದ ತನಿಖೆಯನ್ನು ಬೆಂಗಳೂರು ಸೈಬರ್ ಕ್ರೈಂ ಪೊಲೀಸರು ಮತ್ತಷ್ಟು ಚುರುಕುಗೊಳಿಸಿದ್ದು, ತನಿಖೆಯಲ್ಲಿ ಹಲವು ಆಘಾತಕಾರಿ ಸಂಗತಿಗಳು ಹೊರಬಂದಿವೆ.
ಈ ಪ್ರಕರಣಕ್ಕೆಂದೇ ಪ್ರತ್ಯೇಕವಾಗಿ 'ಕರ್ನಾಟಕ ಹನಿ ಟ್ರಾಪ್' ಹೆಸರಿನಲ್ಲಿ ಹೊಸ ಯೂಟ್ಯೂಬ್ ಚಾನೆಲ್ ತೆರೆದಿರುವುದು ತನಿಖೆಯಿಂದ ಬೆಳಕಿಗೆ ಬಂದಿದೆ.
ಚಾನೆಲ್ ಸೃಷ್ಟಿಯಾದ ಬೆನ್ನಲ್ಲೇ ನಾಲ್ಕು ವಿಡಿಯೋಗಳನ್ನು ಅಪ್ಲೋಡ್ ಮಾಡಲಾಗಿದ್ದು, ಕೆಲವೇ ಕ್ಷಣಗಳಲ್ಲಿ 54 ಮಂದಿ ಇದಕ್ಕೆ ಸಬ್ಸ್ಕ್ರೈಬ್ ಆಗಿದ್ದಾರೆ.
ಈ ಸ್ಟಿಂಗ್ ಆಪರೇಷನ್ ಹಾಗೂ ವೀಡಿಯೊಗಳ ಅಪ್ಲೋಡ್ ಹಿಂದೆ ಇರುವ ಮಾಸ್ಟರ್ ಮೈಂಡ್ ಯಾರೆಂಬುದನ್ನು ಪತ್ತೆಹಚ್ಚಲು ಪೊಲೀಸರು ತೀವ್ರ ಶ್ರಮಿಸುತ್ತಿದ್ದಾರೆ. ಈಗಾಗಲೇ 15 ಜನರನ್ನು ವಿಸ್ತೃತ ವಿಚಾರಣೆಗೆ ಒಳಪಡಿಸಲಾಗಿದೆ.
ಚಾನೆಲ್ ಅನ್ನು ಸಬ್ಸ್ಕ್ರೈಬ್ ಮಾಡಿಕೊಂಡಿರುವ ಆ 54 ಜನರ ಸಂಪೂರ್ಣ ಹಿನ್ನೆಲೆ ಹಾಗೂ ಅವರ ಸಂಪರ್ಕಗಳ ಕುರಿತು ಪೊಲೀಸರು ಸಮಗ್ರ ಮಾಹಿತಿ ಕಲೆಹಾಕುತ್ತಿದ್ದು, ಯಾರದ್ದಾದರೂ ಪ್ರಚೋದನೆ ಅಥವಾ ನಿರ್ದೇಶನದ ಮೇರೆಗೆ ಈ ಕೃತ್ಯ ನಡೆದಿದೆಯೇ ಎಂಬ ಕೋನದಲ್ಲಿ ತನಿಖೆ ಮುಂದುವರಿದಿದೆ.
ಕಳೆದ ಅಕ್ಟೋಬರ್ 6ರಂದೇ ಪ್ರಕರಣ ದಾಖಲಾಗಿದ್ದರೂ ಪ್ರಮುಖ ಮಾಸ್ಟರ್ ಮೈಂಡ್ ಇನ್ನೂ ಪೊಲೀಸರ ಕೈಗೆ ಸಿಕ್ಕಿಲ್ಲ. ಹೀಗಾಗಿ ಪ್ರಕರಣದ ಜಾಲವನ್ನು ಸಂಪೂರ್ಣವಾಗಿ ಭೇದಿಸಲು ಸೈಬರ್ ಕ್ರೈಂ ಪೊಲೀಸರು ಹೆಚ್ಚಿನ ಸಂಖ್ಯೆಯ ಶಂಕಿತರನ್ನು ವಿಚಾರಣೆಗೆ ಕರೆಸಲು ಸಿದ್ಧತೆ ನಡೆಸಿದ್ದಾರೆ. ಹನಿ ಟ್ರಾಪ್ ಮತ್ತು ಸ್ಟಿಂಗ್ ಆಪರೇಷನ್ ಜಾಲದ ಹಿಂದೆ ಯಾರಿದ್ದಾರೆ ಎಂಬ ಅಸಲಿ ಸತ್ಯ ಶೀಘ್ರದಲ್ಲೇ ಹೊರಬರುವ ನಿರೀಕ್ಷೆಯಿದೆ.


