ಬಾಗಲಕೋಟೆ: ಹೋಮ್‌ವರ್ಕ್ ಮಾಡಿಲ್ಲ ಎಂಬ ಕಾರಣಕ್ಕೆ ಎರಡನೇ ತರಗತಿಯ ಬಾಲಕನ ಮೇಲೆ ಸಹ ಶಿಕ್ಷಕಿ ಹಾಗೂ ಮುಖ್ಯಶಿಕ್ಷಕ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾದ ಘಟನೆ ಬಾಗಲಕೋಟೆ ಜಿಲ್ಲೆಯ ರಬಕವಿ-ಬನಹಟ್ಟಿ ತಾಲೂಕಿನ ನಾವಲಗಿ ಗ್ರಾಮದಲ್ಲಿ ನಡೆದಿದೆ.
ಹಲ್ಲೆಯಿಂದ ಬಾಲಕನ ಮೈಮೇಲೆ ಬಾಸುಂಡೆಗಳು ಮೂಡಿದ್ದು, ಗಾಯಗೊಂಡಿರುವ ವಿದ್ಯಾರ್ಥಿಯನ್ನು ಜಮಖಂಡಿಯ ಖಾಸಗಿ ಆಸ್ಪತ್ರೆಗೆದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.ಶಿಕ್ಷಕರ ಅಮಾನವೀಯ ವರ್ತನೆಗೆ ಪೋಷಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಾವಲಗಿ ಗ್ರಾಮದ ರಾಣಿ ಚೆನ್ನಮ್ಮ ಖಾಸಗಿ ಅನುದಾನಿತ ಪ್ರಾಥಮಿಕ ಶಾಲೆಯಲ್ಲಿ ಈ ಘಟನೆ ನಡೆದಿದ್ದು, ಎರಡನೇ ತರಗತಿ ವಿದ್ಯಾರ್ಥಿ ಶ್ರೇಯಸ್ ಆಸಂಗಿ ಮೇಲೆ ಸಹ ಶಿಕ್ಷಕಿ ವಿಜಯಲಕ್ಷ್ಮಿ ತಳವಾರ ಹಲ್ಲೆ ನಡೆಸಿದ್ದಾರೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.
ಬಳಿಕ ಅಲ್ಲಿದ್ದ ಮುಖ್ಯಶಿಕ್ಷಕ ಅಂಬಿ ಕೂಡ ಲಾಠಿಯಿಂದ ಬಾಲಕನ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಲಾಗಿದೆ.
ಅನಾರೋಗ್ಯದ ಕಾರಣ ಶ್ರೇಯಸ್ ಕಳೆದ ಎರಡು ದಿನಗಳಿಂದ ಶಾಲೆಗೆ ಹಾಜರಾಗಿರಲಿಲ್ಲವಾಗಿದ್ದು, ಬುಧವಾರ ಮತ್ತೆ ಶಾಲೆಗೆ ಬಂದಾಗ ಹೋಮ್‌ವರ್ಕ್ ಮಾಡದಿರುವುದನ್ನು ಪ್ರಶ್ನಿಸಿ ಶಿಕ್ಷಕಿ ಹಲ್ಲೆ ನಡೆಸಿದ್ದಾರೆ ಮತ್ತು ನಂತರ ಮುಖ್ಯಶಿಕ್ಷಕರು ಕೂಡ ಬಾಲಕನ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಕುಟುಂಬಸ್ಥರು ಆರೋಪಿ ಸಿದ್ದಾರೆ.

