ಮಾನ್ವಿ: ಪಟ್ಟಣದ ಲೊಯೋಲಾ ಶಿಕ್ಷಣ ಸಂಸ್ಥೆಯ ಸಭಾಂಗಣದಲ್ಲಿ ಗುರುವಾರ ಸಂವಿಧಾನ ದಿನಾಚರಣೆ ಅಂಗವಾಗಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
ಬೆಂಗಳೂರು ಆದಿ ಜಾಂಬವ ಅಭಿವೃದ್ಧಿ ನಿಗಮದ ರಾಜ್ಯ ನಿರ್ದೇಶಕರಾದ ತಾಯಪ್ಪ ಬಿ. ಹೊಸೂರು ಮಾತನಾಡಿ ಡಾ. ಬಿ.ಆರ್. ಅಂಬೇಡ್ಕರ್ ಅವರ ನೇತೃತ್ವದಲ್ಲಿ ರಚನೆಯಾದ ಭಾರತದ ಸಂವಿಧಾನವು ದೇಶದ ಪ್ರತಿಯೊಬ್ಬ ಪ್ರಜೆಗೂ ಸಮಾನ ಹಕ್ಕು ಗೌರವ ಮತ್ತು ನ್ಯಾಯವನ್ನು ಒದಗಿಸಿದೆ. ಜಾತಿ ಪದ್ಧತಿ ಅಸ್ಪೃಶ್ಯತೆ ಅಸಮಾನತೆ ಹಾಗೂ ಶೋಷಣೆಯನ್ನು ನಿರ್ಮೂಲನೆ ಮಾಡಿ ಎಲ್ಲರೂ ಸಮಾನವಾಗಿ ಬದುಕುವ ಸಮಾಜ ನಿರ್ಮಾಣವೇ ಸಂವಿಧಾನದ ಮುಖ್ಯ ಉದ್ದೇಶವಾಗಿದೆ. ಸಂವಿಧಾನದ ಮುಂದೆ ಎಲ್ಲರೂ ಸಮಾನರು ಎಂಬ ತತ್ತ್ವವನ್ನು ಪ್ರತಿಯೊಬ್ಬರೂ ಅರಿತು ಅನುಸರಿಸಿದಾಗ ಮಾತ್ರ ಉತ್ತಮ ಸಮಾಜ ಮತ್ತು ರಾಷ್ಟ್ರ ನಿರ್ಮಾಣ ಸಾಧ್ಯ ಎಂದು ಹೇಳಿದರು.
ಲೊಯೋಲಾ ಶಿಕ್ಷಣ ಸಂಸ್ಥೆಯ ಮುಖ್ಯಸ್ಥರಾದ ರೆ. ಫಾ. ಸಿಪ್ರಿಯನ್ ಟೆಲ್ಲಿಸ್ ಎಸ್.ಜೆ. ಮಾತನಾಡಿ ಸಂವಿಧಾನದ ಮೌಲ್ಯಗಳನ್ನು ಪ್ರತಿಯೊಬ್ಬರೂ ಗೌರವಿಸಿ ತಮ್ಮ ದೈನಂದಿನ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಎಲ್ಲರಿಗೂ ಶಿಕ್ಷಣ, ಸಮಾನ ಅವಕಾಶ ಹಾಗೂ ಗೌರವ ದೊರೆಯುವ ಮೂಲಕ ಸ್ವಾಭಿಮಾನದಿಂದ ಬದುಕುವ ಸಮಾಜ ನಿರ್ಮಾಣವಾಗಬೇಕು ಎಂಬುದೇ ಸಂವಿಧಾನದ ಆಶಯವಾಗಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಸಂವಿಧಾನದ ಪೀಠಿಕೆಯನ್ನು ಸಾಮೂಹಿಕವಾಗಿ ವಾಚಿಸಲಾಯಿತು. ವಿದ್ಯಾರ್ಥಿಗಳು ಸಂವಿಧಾನದ ಮಹತ್ವ ಹಾಗೂ ಡಾ. ಬಿ.ಆರ್. ಅಂಬೇಡ್ಕರ್ ಅವರ ಜೀವನಾಧಾರಿತ ಕಿರುನಾಟಕ, ನೃತ್ಯ ಮತ್ತು ಮೌನಾಭಿನಯ ಪ್ರದರ್ಶಿಸಿ ಗಮನ ಸೆಳೆದರು. ಸಂವಿಧಾನ ದಿನಾಚರಣೆ ಅಂಗವಾಗಿ ಆಯೋಜಿಸಿದ್ದ ವಿವಿಧ ಸ್ಪರ್ಧೆಗಳ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.
ಇದೇ ಸಂದರ್ಭದಲ್ಲಿ ಮಾನ್ವಿ ಪಟ್ಟಣದವರಾದ ತಾಯಪ್ಪ ಬಿ. ಹೊಸೂರು ಅವರು ಬೆಂಗಳೂರು ಆದಿ ಜಾಂಬವ ಅಭಿವೃದ್ಧಿ ನಿಗಮದ ರಾಜ್ಯ ನಿರ್ದೇಶಕರಾಗಿ ನೂತನವಾಗಿ ಆಯ್ಕೆಯಾಗಿರುವ ಹಿನ್ನೆಲೆಯಲ್ಲಿ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಲೊಯೋಲಾ ಪದವಿ ಕಾಲೇಜಿನ ಪ್ರಾಂಶುಪಾಲರಾದ ರೆ. ಫಾ. ವಿನೋದ್ ಪಾಲ್ ಎಸ್.ಜೆ., ಕ್ಸೇವಿಯರ್ ಶಾಲೆಯ ಪ್ರಾಂಶುಪಾಲರಾದ ರೆ. ಫಾ. ವಿಲ್ಸನ್ ಬೆನ್ನಿಸ್ ಎಸ್.ಜೆ., ಲೊಯೋಲಾ ಸಂಸ್ಥೆಗಳ ಹಣಕಾಸು ಅಧಿಕಾರಿ ರೆ. ಫಾ. ಅವಿನಾಶ್ ಲೋಬೋ ಎಸ್.ಜೆ., ಲೊಯೋಲಾ ಶಾಲೆಯ ನಿರ್ದೇಶಕರಾದ ರೆ. ಫಾ. ಸಿರಿಲ್ ರಾಜ್ ಎಸ್.ಜೆ., ಎಲ್.ಸಿ.ಎಸ್. ಕ್ಷೇತ್ರ ಸಂಯೋಜಕರಾದ ರೆ. ಫಾ. ಶಾಂತಿರಾಜ್ ಎ. ಎಸ್.ಜೆ., ಉಪನ್ಯಾಸಕರು, ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ವರದಿ :ಆಂಜನೇಯ ನಸಲಾಪುರ

