ಭಾಲ್ಕಿ : ಸಿದ್ರಾಮಯ್ಯನವರ ಕಣ್ಣೀರಲ್ಲಿ ಕಾಂಗ್ರೆಸ್ ಪಕ್ಷ ತೊಳೆದುಕೊಂಡು ಹೋಗುತ್ತೆ ಎಂದು ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣ ಸ್ವಾಮಿ ಹೇಳಿದರು. ಪಟ್ಟಣದ ಮಾಜಿ ಶಾಸಕ ಪ್ರಕಾಶ ಖಂಡ್ರೆಯವರ ನಿವಾಸದಲ್ಲಿ ಗುರುವಾರ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್‌ನ ಹಿರಿಯ ಮುಖಂಡ ಸಿದ್ರಾಮಯ್ಯನವರಿಗೆ ಹೇಗೆ ನಡೆಸಿಕೊಳ್ಳಬೇಕು ಎನ್ನುವ ಸಾಮಾನ್ಯ ವಿಷಯ ಕಾಂಗ್ರೆಸ್‌ನವರಿಗೆ ಗೊತ್ತಿಲ್ಲ. ಚಿಕ್ಕವಯಸ್ಸಿನ ರಾಹುಲ್ ಗಾಂಧಿ ಹಿರಿಯರಾದ ಸಿದ್ರಾಮಯ್ಯನವರಿಗೆ ಕಾಲಾವಕಾಶ ಕೊಡದೇ, ತಕ್ಷಣವೇ ರಾಜಿನಾಮೆ ಕೊಡು ಎಂದು ಹೇಳಿರುವುದು ನೋವಿನ ಸಂಗತಿಯಾಗಿದೆ. ದಲಿತರ ಮತದಿಂದ ಬೀಗುತ್ತಿರುವ ಕಾಂಗ್ರೆಸ್ ಪಕ್ಷ ಮೊದಲಿನಿಂದಲೂ ದಲಿತರನ್ನು ತುಳಿಯುತ್ತಾ ಬಂದಿದೆ, ದಲಿತರಿಗೆ ಮುಖ್ಯಮಂತ್ರಿ ಮಾಡುತ್ತೇನೆ ಎಂದು ಬಾಯಿ ಮಾತಲ್ಲಿ ಹೇಳುವ ಕಾಂಗ್ರೆಸ್ ಖಗ್ರೆಯವರಿಗೆ ಮುಖ್ಯಮಂತ್ರಿ ಮಾಡಲಿ, ಇಲ್ಲವೇ ವಯಸ್ಸಿನ ನೆಪ ಹೇಳಿದರೆ ಕಾಂಗ್ರೆಸ್ ನಲ್ಲಿಯೂ ತುಂಬಾ ದಲಿತ ನಾಯಕರಿದ್ದಾರೆ, ಜಿ. ಪರಮೆಶ್ವರ, ಕೆ. ಹೆಚ್. ಮುನಿಯಪ್ಪ ಸೇರಿದಂತೆ ಉತ್ತಮ ದಲಿತ ನಾಯಕರಿದ್ದಾರೆ ಅವರಿಗಾದರೂ ಕಾಂಗ್ರೆಸ್ ಮುಖ್ಯಮಂತ್ರಿ ಮಾಡಲಿ ಎಂದರು. ಮುಂಬರುವ ದಿನಗಳಲ್ಲಿ ಕಾಂಗ್ರೆಸ್ ಪಕ್ಷ ಧೂಳಿಪಟವಾಗಲಿದೆ. ೨೦೨೮ರ ಚುನಾವಣೆಯಲ್ಲಿ ಬಿಜೆಪಿ ೧೫೦ ಕ್ಕಿಂತ ಹೆಚ್ಚು ಸ್ಥಾನ ಗಳಿಸಿ ಅಧಿಕಾರಕ್ಕೆ ಬರುತ್ತದೆ ಎಂದು ಭವಿಷ್ಯ ನುಡಿದರು.
ಈ ಸಂದರ್ಭದಲ್ಲಿ ಮಾಜಿ ಶಾಸಕ ಪ್ರಕಾಶ ಖಂಡ್ರೆ, ಶಾಸಕರಾದ ಪ್ರಭು ಚವ್ಹಾಣ, ಡಾ|| ಶೈಲೇಂದ್ರ ಬೆಲ್ದಾಳೆ ಇದ್ದರು.
ವರದಿ : ಸಂತೋಷ ಬಿಜಿ ಪಾಟೀಲ

