ಬೆಂಗಳೂರು: ರಾಜ್ಯ ಕಾಂಗ್ರೆಸ್ ಸರ್ಕಾರದಲ್ಲಿ ನಾಯಕತ್ವ ಬದಲಾವಣೆಯಾಗಲಿದೆ ಎಂಬ ವದಂತಿಗಳಿಗೆ ಸಚಿವ ಆರ್.ಬಿ. ತಿಮ್ಮಾಪುರ್ (RB Timmapur) ಅವರು ಬ್ರೇಕ್ ಹಾಕಿದ್ದಾರೆ. ಈ ಕುರಿತು ಹೈಕಮಾಂಡ್ ಮಟ್ಟದಲ್ಲಿ ಯಾವುದೇ ಚರ್ಚೆಗಳು ನಡೆದಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ನಾಯಕತ್ವ ಬದಲಾವಣೆಯ ಬಗ್ಗೆ ಹೈಕಮಾಂಡ್ ಎಲ್ಲಿಯೂ ಹೇಳಿಲ್ಲ, ಇದು ಕೇವಲ ಮಾಧ್ಯಮಗಳಲ್ಲಿ ಚರ್ಚೆಯಾಗುತ್ತಿರುವ ವಿಚಾರ ಮಾತ್ರ ಎಂದು ಅವರು ತಿಳಿಸಿದ್ದಾರೆ.
ಯತೀಂದ್ರ ಅವರದ್ದು ವೈಯಕ್ತಿಕ ಅಭಿಪ್ರಾಯ
ಇನ್ನು ಶಾಸಕ ಯತೀಂದ್ರ ಸಿದ್ದರಾಮಯ್ಯ ಅವರು ನೀಡಿರುವ ಹೇಳಿಕೆಯ ಕುರಿತು ಪ್ರತಿಕ್ರಿಯಿಸಿದ ಸಚಿವರು, ಅದು ಅವರ ವೈಯಕ್ತಿಕ ಅಭಿಪ್ರಾಯವಾಗಿರಬಹುದು ಆದರೆ ಪಕ್ಷದ ಅಧಿಕೃತ ನಿರ್ಧಾರವಲ್ಲ ಎಂದಿದ್ದಾರೆ.
ಶಾಸಕರು ಸಚಿವ ಸ್ಥಾನ ಕೇಳುವುದರಲ್ಲಿ ಯಾವುದೇ ತಪ್ಪಿಲ್ಲ, ಮಲ್ಲಿಕಾರ್ಜುನ ಖರ್ಗೆ ಅವರು ಭೇಟಿಗೆ ಸಮಯ ನಿಗದಿಪಡಿಸುವುದಾಗಿ ಹೇಳಿದ್ದಾರೆ ಆದರೆ ಆ ದಿನಾಂಕ ಇನ್ನೂ ನಿಗದಿಯಾಗಿಲ್ಲ ಎಂದು ಸಚಿವರು ಮಾಹಿತಿ ನೀಡಿದ್ದಾರೆ.
ಮೇ 15ರ ಆಸುಪಾಸಿನಲ್ಲಿ ಹೈಕಮಾಂಡ್ ರಾಜ್ಯ ನಾಯಕರನ್ನು ದೆಹಲಿಗೆ ಕರೆಸಲಿದೆ ಎಂಬ ಸುದ್ದಿಗಳ ನಡುವೆಯೇ ತಿಮ್ಮಾಪುರ್ ಅವರ ಈ ಹೇಳಿಕೆ ಹೊರಬಂದಿದ್ದು, ಸದ್ಯಕ್ಕೆ ಮುಖ್ಯಮಂತ್ರಿ ಬದಲಾವಣೆಯಂತಹ ಯಾವುದೇ ಬೆಳವಣಿಗೆಗಳು ಅಧಿಕೃತವಾಗಿ ನಡೆಯುತ್ತಿಲ್ಲ ಎಂಬ ಸಂದೇಶ ರವಾನಿಸಿದ್ದಾರೆ.

