ಹುಬ್ಬಳ್ಳಿ: ರೈತರ (farmers) ನ್ಯಾಯಯುತ ಬೇಡಿಕೆಗಳನ್ನು ಈಡೇರಿಸುವವರೆಗೆ ಸಕ್ಕರೆ (Sugar) ಸೇವಿಸುವುದಿಲ್ಲ ಎಂದು ಶಿರಹಟ್ಟಿಯ ಫಕೀರ ದಿಂಗಾಲೇಶ್ವರ ಸ್ವಾಮೀಜಿ ಘೋಷಿಸಿದ್ದಾರೆ.
ರೈತರ ಸಮಸ್ಯೆಗಳಿಗೆ ಸ್ಪಂದಿಸದ ಕೇಂದ್ರ ಸರ್ಕಾರದ ಧೋರಣೆಯನ್ನು ಖಂಡಿಸಿದ ಅವರು, ಮಠಾಧೀಶರು, ಧರ್ಮಗುರುಗಳು, ಸಾಹಿತಿಗಳು ಹಾಗೂ ಚಲನಚಿತ್ರ ಕಲಾವಿದರು ರೈತರ ಹೋರಾಟಕ್ಕೆ ಕೈಜೋಡಿಸಬೇಕೆಂದು ಕರೆ ನೀಡಿದ್ದಾರೆ.
ಕಬ್ಬಿಗೆ ಸೂಕ್ತ ಬೆಲೆ ನಿಗದಿಪಡಿಸಲು ಮತ್ತೊಂದು ಸಮಿತಿ ರಚಿಸುವ ಬದಲು, ಸ್ವಾಮಿನಾಥನ್ ಆಯೋಗದ ಶಿಫಾರಸುಗಳನ್ನು ಜಾರಿಗೊಳಿಸಬೇಕು ಎಂದು ಅವರು ಒತ್ತಾಯಿಸಿದರು.
ಕಬ್ಬು ಕಟಾವಿನಲ್ಲಿ ವಿಳಂಬವಾದರೆ ತೂಕ ಕಡಿಮೆಯಾಗಿ ರೈತರಿಗೆ ನಷ್ಟವಾಗುತ್ತದೆ. ಇದೇ ವೇಳೆ ರಸಗೊಬ್ಬರ, ವಿದ್ಯುತ್ ಹಾಗೂ ಕಾರ್ಮಿಕರ ವೆಚ್ಚ ಹೆಚ್ಚುತ್ತಿರುವುದರಿಂದ ಕೃಷಿ ಕ್ಷೇತ್ರದ ಸಂಕಷ್ಟ ಮತ್ತಷ್ಟು ತೀವ್ರವಾಗಿದೆ ಎಂದು ತಿಳಿಸಿದರು.


