ಮೀರತ್: ದೇಶಾದ್ಯಂತ ತೀವ್ರ ಸಂಚಲನ ಮೂಡಿಸಿದ್ದ 'ಮೀರತ್ ಬ್ಲೂ ಡ್ರಮ್' ಹತ್ಯೆ ಪ್ರಕರಣದಲ್ಲಿ ಮೀರತ್ ಜಿಲ್ಲಾ ನ್ಯಾಯಾಲಯವು ಐತಿಹಾಸಿಕ ತೀರ್ಪು ಪ್ರಕಟಿಸಿದೆ.
ಮರ್ಚೆಂಟ್ ನೇವಿ ಅಧಿಕಾರಿ ಸೌರಭ್ ರಜಪೂತ್ ಅವರನ್ನು ಬರ್ಬರವಾಗಿ ಕೊಲೆ ಮಾಡಿ, ಮೃತದೇಹದ ತುಂಡುಗಳನ್ನು ಸಿಮೆಂಟ್ ತುಂಬಿದ ನೀಲಿ ಡ್ರಮ್ನಲ್ಲಿ ಬಚ್ಚಿಟ್ಟಿದ್ದ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಮೃತನ ಪತ್ನಿ ಮುಸ್ಕಾನ್ ರಸ್ತೋಗಿ ಹಾಗೂ ಆಕೆಯ ಪ್ರಿಯಕರ ಸಾಹಿಲ್ ಶುಕ್ಲಾಗೆ ನ್ಯಾಯಾಲಯ ಗಲ್ಲು ಶಿಕ್ಷೆ (ಮರಣದಂಡನೆ) ವಿಧಿಸಿದೆ.
ಬುಧವಾರ ನಡೆದ ನ್ಯಾಯಾಲಯ ಕಲಾಪದ ವೇಳೆ ಇಬ್ಬರೂ ಅಪರಾಧಿಗಳು ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ವಿಚಾರಣೆಗೆ ಹಾಜರಾಗಿದ್ದು, ಅವರ ಕುಟುಂಬದ ಸದಸ್ಯರು ನ್ಯಾಯಾಲಯದ ಕೊಠಡಿಯಲ್ಲಿದ್ದರು.
13 ತಿಂಗಳು, 126 ವಿಚಾರಣೆಗಳ ಬಳಿಕ ಮಹತ್ವದ ತೀರ್ಪು
ಸುಮಾರು 13 ತಿಂಗಳುಗಳ ಕಾಲ ನಿರಂತರ ವಿಚಾರಣೆ ನಡೆಸಿದ ನ್ಯಾಯಾಲಯವು ಸೆಪ್ಟೆಂಬರ್ 30 ರಂದೇ ಇಬ್ಬರನ್ನೂ ದೋಷಿಗಳು ಎಂದು ತೀರ್ಮಾನಿಸಿತ್ತು. ಶಿಕ್ಷೆಯ ಪ್ರಮಾಣ ಕುರಿತ ವಾದ ಮಂಡನೆಗೆ ನ್ಯಾಯಾಲಯ 15 ದಿನಗಳ ಕಾಲಾವಕಾಶ ನೀಡಿತ್ತು. ಕೃತ್ಯದ ಭೀಕರತೆ ಮತ್ತು ಸಾಕ್ಷ್ಯಾಧಾರಗಳನ್ನು ಪರಿಗಣಿಸಿ ಗರಿಷ್ಠ ಶಿಕ್ಷೆ ನೀಡುವಂತೆ ಪ್ರಾಸಿಕ್ಯೂಷನ್ ಬಲವಾಗಿ ವಾದಿಸಿತ್ತು.
ಸುಪ್ರೀಂ ಕೋರ್ಟ್ನ ಮಹತ್ವದ ಆದೇಶಗಳನ್ನು ಉಲ್ಲೇಖಿಸಿದ ನ್ಯಾಯಾಲಯ, ಇಂತಹ ಘೋರ ಮತ್ತು ಅಮಾನವೀಯ ಅಪರಾಧಗಳನ್ನು ಎಸಗಿದವರಿಗೆ ತಕ್ಕುದಾದ ಕಠಿಣ ಶಿಕ್ಷೆಯೇ ಸೂಕ್ತ ಎಂಬ ಅಭಿಪ್ರಾಯದೊಂದಿಗೆ ಅಪರಾಧಿಗಳಿಗೆ ಮರಣದಂಡನೆ ಪ್ರಕಟಿಸಿದೆ.


