ವಿಜಯನಗರ : ಜಿಲ್ಲೆ ಯ ಹಗರಿಬೊಮ್ಮನಹಳ್ಳಿಯಲ್ಲಿ ದಲಿತಪರ ಸಂಘಟನೆಗಳ ಸಮ್ಮುಖದಲ್ಲಿ ಸರಳವಾಗಿ ನಡೆದ ಐತಿಹಾಸಿಕ ಕಾರ್ಯಕ್ರಮ
ವಿಜಯನಗರ ಜಿಲ್ಲೆಯ ಹಗರಿಬೊಮ್ಮನಹಳ್ಳಿ ಪಟ್ಟಣದಲ್ಲಿ ಹಸಿರು ಕ್ರಾಂತಿಯ ಹರಿಕಾರರು, ಶೋಷಿತರ ಧ್ವನಿಯಾಗಿ ದೇಶದ ರಾಜಕೀಯ ಇತಿಹಾಸದಲ್ಲಿ ಅಜರಾಮರರಾಗಿರುವ ರಾಷ್ಟ್ರನಾಯಕ ಡಾ॥ ಬಾಬು ಜಗಜೀವನ್ ರಾಮ್ ಅವರ ವೃತ್ತ ಅನಾವರಣ ಕಾರ್ಯಕ್ರಮವು ದಿನಾಂಕ 26/05/2026 ಮಂಗಳವಾರ ಬೆಳಿಗ್ಗೆ 10:00 ಗಂಟೆಗೆ ಸರಳ ಹಾಗೂ ಗೌರವಯುತವಾಗಿ ನಡೆಯಿತು.
ಪೊಲೀಸ್ ಸ್ಟೇಷನ್ ಮುಂಭಾಗದ ಹೊಸಪೇಟೆ ರಸ್ತೆಯಲ್ಲಿ ಆಯೋಜಿಸಿದ್ದ ಈ ಕಾರ್ಯಕ್ರಮದಲ್ಲಿ ವಿಜಯನಗರ ಜಿಲ್ಲಾ ಹಗರಿಬೊಮ್ಮನಹಳ್ಳಿ ತಾಲೂಕು ಡಾ॥ ಬಾಬು ಜಗಜೀವನ್ ರಾಮ್ ಸಂಘದ ಅಧ್ಯಕ್ಷರಾದ ಹೆಚ್. ಪ್ರಭಾಕರ್ ಹಾಗೂ ಸಮಸ್ತ ದಲಿತಪರ ಸಂಘಟನೆಗಳ ಅಧ್ಯಕ್ಷರು, ಉಪಾಧ್ಯಕ್ಷರು, ಪದಾಧಿಕಾರಿಗಳು ಮತ್ತು ಸರ್ವ ಸದಸ್ಯರು ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.
ತಾಲೂಕು ಅಧ್ಯಕ್ಷರಾದ ಹೆಚ್. ಪ್ರಭಾಕರ್ ಮಾತನಾಡಿ, “ಡಾ॥ ಬಾಬು ಜಗಜೀವನ್ ರಾಮ್ ಅವರು ಶೋಷಿತ ಸಮುದಾಯದ ಧ್ವನಿಯಾಗಿ ದೇಶದ ಅಭಿವೃದ್ಧಿಗೆ ಅಪಾರ ಕೊಡುಗೆ ನೀಡಿದ್ದಾರೆ. ಅವರ ಆದರ್ಶಗಳು ಯುವಜನತೆಗೆ ಪ್ರೇರಣೆಯಾಗಬೇಕು,” ಎಂದು ಹೇಳಿದರು.

ದಲಿತ ಸಂಘರ್ಷ ಸಮಿತಿ ತಾಲೂಕು ಅಧ್ಯಕ್ಷರಾದ ಹೆಗ್ಡಳ್ ಪರಶುರಾಮ್ ಮಾತನಾಡಿ, “ಸಾಮಾಜಿಕ ನ್ಯಾಯ ಹಾಗೂ ಸಮಾನತೆಯ ಪರ ಹೋರಾಡಿದ ಮಹಾನ್ ನಾಯಕನ ಹೆಸರನ್ನು ವೃತ್ತಕ್ಕೆ ನಾಮಕರಣ ಮಾಡಿರುವುದು ದಲಿತ ಸಮುದಾಯಕ್ಕೆ ಹೆಮ್ಮೆಯ ಸಂಗತಿ,” ಎಂದು ಅಭಿಪ್ರಾಯಪಟ್ಟರು. ಕೆಚ್ಚಿನಬಂಡಿ ದುರುಗಪ್ಪ ಮಾತನಾಡಿ, “2011-2012ರಲ್ಲಿ ಹಿಂದಿನ ಶಾಸಕರಾದ ಮಾನ್ಯ ನೇಮಿರಾಜ್ ನಾಯ್ಕ ಅವರು ಡಾ॥ ಬಿ.ಆರ್. ಅಂಬೇಡ್ಕರ್ ವೃತ್ತವನ್ನು ಪೂಜೆ ಸಲ್ಲಿಸುವ ಮೂಲಕ ಅನಾವರಣಗೊಳಿಸಿದ್ದರು. ನಾಲ್ಕು ವರ್ಷಗಳ ಕಾಲ ಅಲ್ಲಿ ಅಂಬೇಡ್ಕರ್ ಜಯಂತಿಯನ್ನು ಆಚರಿಸಲಾಗುತ್ತಿತ್ತು. ನಂತರ ಕಾರಣಾಂತರಗಳಿಂದ ಅಂಬೇಡ್ಕರ್ ವೃತ್ತವನ್ನು ಪಕ್ಕದಲ್ಲಿರುವ ರಾಮನಗರ ಸರ್ಕಲ್‌ಗೆ ಸ್ಥಳಾಂತರ ಮಾಡಲಾಯಿತು. ಈಗ ಅದೇ ಸ್ಥಳವನ್ನು ಹಾಲಿ ಶಾಸಕರಾದ ಮಾನ್ಯ ನೇಮಿರಾಜ್ ನಾಯ್ಕ ಅವರ ಸಲಹೆ ಹಾಗೂ ಸಹಕಾರದ ಮೇರೆಗೆ ಡಾ॥ ಬಾಬು ಜಗಜೀವನ್ ರಾಮ್ ವೃತ್ತ ಎಂದು ನಾಮಕರಣ ಮಾಡಲಾಗಿದೆ,” ಎಂದು ವಿವರಿಸಿದರು.
ಕಡ್ಲಬಾಳು ಪಕ್ಕೀರಪ್ಪ ಮಾತನಾಡಿ, “ಸಮಾಜದ ಹಿಂದುಳಿದ ವರ್ಗಗಳ ಹಕ್ಕುಗಳಿಗಾಗಿ ಹೋರಾಡಿದ ಮಹಾನ್ ನಾಯಕರ ಸ್ಮರಣೆ ಸದಾ ಉಳಿಯಬೇಕು. ಇಂತಹ ವೃತ್ತಗಳ ನಿರ್ಮಾಣದಿಂದ ಯುವಪೀಳಿಗೆಗೆ ಇತಿಹಾಸ ಹಾಗೂ ಸಾಮಾಜಿಕ ಹೋರಾಟಗಳ ಅರಿವು ಮೂಡುತ್ತದೆ,” ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಹಿರಿಯರಾದ ಯಡ್ರಮ್ಮಹಳ್ಳಿ ಮರಿಯಪ್ಪ, ರಾಮೇಶ್ ಪೂಜಾರಿ, ನಾಗರಾಜ್ ಕಲ್ಲಹಳ್ಳಿ, ವಕೀಲರಾದ ನವೀನ್ ಮಹೇಂದ್ರ, ದುರುಗಪ್ಪ ಕಿತ್ನೂರು ಭಾಗವಹಿಸಿದ್ದರು. ಅಲ್ಲದೆ ಚಿಂತ್ರಪಳ್ಳಿ ರಮೇಶ್, ದಶಮಾಪುರ ಮರಿಯಪ್ಪ, ಅರೆಗೊಂಡನಹಳ್ಳಿ ದುರುಗಪ್ಪ, ದೂಪದಹಳ್ಳಿ ಕೋಟೇಪ್ಪ, ಕೆಚ್ಚಿನಬಂಡಿ ಕೆಂಚಪ್ಪ ಬಸವರಾಜ್, ಗೊಣೆಪ್ಪ, ಶಿವಮೂರ್ತಿ ನೆಲ್ಲಕುದುರೆ, ಪ್ರತಾಪ್ ಬೆಣ್ಣಿಕಲ್, ಕೊಟ್ರೇಶ, ಸುಬ್ರಹ್ಮಣ್ಯ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
ವರದಿ : ಎಂ ಮಂಜುನಾಥ

