ಬೈಲಹೊಂಗಲ : ತಾಲೂಕಿನ ಬೂದಿಹಾಳ ಸರಕಾರಿ ಪ್ರೌಢಶಾಲೆಯಲ್ಲಿ ಸನ್ 2026-27 ನೆಯ ಸಾಲಿನ ಶಾಲಾ ಸಂಸತ್ತಿಗೆ ಆಯ್ಕೆಯಾದ ನೂತನ ಮಂತ್ರಿಗಳ ಪದಗ್ರಹಣ ಸಮಾರಂಭ ಜರುಗಿತು. ಸಂಸತ್ತಿನ ಮಂತ್ರಿಗಳಾಗಿ ಪಲ್ಲವಿ ಸೂರ್ಯವಂಶಿ (ಪ್ರಧಾನ ಮಂತ್ರಿ), ಐಶ್ವರ್ಯ ಮರಳಸಿದ್ದನವರ (ಮಹಿಳಾ ಪ್ರತಿನಿಧಿ), ಸಂತೋಷ ಬೋಬಡೆ (ಪ್ರವಾಸ ಮಂತ್ರಿ), ಚನ್ನಬಸವ್ವ ಸೊಗಲದ (ಹಣಕಾಸು ಮಂತ್ರಿ), ವಿದ್ಯಾ ಗರಗದ (ಶಿಕ್ಷಣ ಮಂತ್ರಿ), ಸುರೇಶ ಹೊಸೂರ (ಆರೋಗ್ಯ ಮತ್ತು ಸ್ವಚ್ಛತಾ ಮಂತ್ರಿ), ಹರೀಶ ಗರಗದ (ಕ್ರೀಡಾ ಮಂತ್ರಿ), ರೋಹಿತ ನಿಂಬಾಳಕರ (ಗ್ರಂಥಾಲಯ ಮಂತ್ರಿ), ಅರ್ಪಿತಾ ಬೋಬಡೆ (ಸಾಂಸ್ಕೃತಿಕ ಮಂತ್ರಿ) ಪ್ರತೀಕ್ಷಾ ಜೋಗಿಗುಡ್ಡ (ವಿಜ್ಞಾನ ಮತ್ತು ತಂತ್ರಜ್ಞಾನ ಮಂತ್ರಿ) ದೇವರ ಮತ್ತು ಸಂವಿಧಾನದ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದರು. ಸಮನ್ವಿ ಗಡಾದ ವಿರೋಧ ಪಕ್ಷದ ನಾಯಕಿಯಾಗಿ ಆಯ್ಕೆಯಾದರು. ದೈಹಿಕ ಶಿಕ್ಷಣ ಶಿಕ್ಷಕರಾದ ಪ್ರವೀಣ ಗುರುನಗೌಡರ ಪ್ರಮಾಣ ವಚನ ಬೋಧಿಸಿದರು. ನೂತನ ಮಂತ್ರಿಗಳಿಗೆ ನಾಮಫಲಕಗಳನ್ನು ವಿತರಣೆ ಮಾಡಲಾಯಿತು.
ಮುಖ್ಯ ಶಿಕ್ಷಕ ಎನ್.ಆರ್.ಠಕ್ಕಾಯಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿ ಅಧಿಕಾರ ವಹಿಸಿಕೊಂಡ ಎಲ್ಲ ವಿದ್ಯಾರ್ಥಿಗಳು ತಮ್ಮ ಜವಾಬ್ದಾರಿ ಅರಿತುಕೊಂಡು ಉತ್ತಮವಾಗಿ ಕಾರ್ಯ ನಿರ್ವಹಿಸಬೇಕು ಎಂದರು. ಶಾಲೆಯ ದೈನಂದಿನ ಎಲ್ಲ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡು ತಂಡವಾಗಿ ಕರ್ತವ್ಯ ನಿಭಾಯಿಸುವಂತೆ ಕಿವಿಮಾತು ಹೇಳಿದರು. ಶಾಲೆಯ ನೂತನ ಪ್ರಧಾನಿ ಪಲ್ಲವಿ ಸೂರ್ಯವಂಶಿ ಮಾತನಾಡಿ ಸಂಸತ್ತಿನ ಎಲ್ಲ ಮಂತ್ರಿಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಶಿಕ್ಷಕರ ಮಾರ್ಗದರ್ಶನದಲ್ಲಿ ವಹಿಸಿದ ಜವಾಬ್ದಾರಿಗಳನ್ನು ಮಾಡುತ್ತೇವೆ ಎಂದರು.
ಕಾರ್ಯಕ್ರಮದಲ್ಲಿ ಎಸ್.ಡಿ.ಎಂ.ಸಿ ಅಧ್ಯಕ್ಷರಾದ ವಿನಾಯಕ ಬಡಿಗೇರ, ಉಪಾಧ್ಯಕ್ಷರಾದ ರಮೇಶ ಸೂರ್ಯವಂಶಿ, ಪದಾಧಿಕಾರಿಗಳಾದ ರಾಮಲಿಂಗಪ್ಪ ಮೆಕ್ಕೇದ, ದುಂಡಪ್ಪ ಮಡಿವಾಳರ, ಶಿಕ್ಷಕರಾದ ಜೆ.ಆರ್ ನರಿ, ಎಚ್.ವಿ ಪುರಾಣಿಕ, ಜಿ.ಬಿ. ತುರಾದಿ, ಎ.ಎಂ. ಬೇಪಾರಿ, ಪ್ರಶಿಕ್ಷಣಾರ್ಥಿ ಉದಯ ಸೊಗಲದ ಹಾಗೂ ಸಹಾಯಕ ಮಂತ್ರಿಗಳು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಶಿಕ್ಷಕರಾದ ವಿ.ಆಯ್.ಕೋಟಗಾರ ಕಾರ್ಯಕ್ರಮ ನಿರ್ವಹಿಸಿದರು. ಶಿಕ್ಷಕರಾದ ಎಸ್.ವಿ.ಬಳಿಗಾರ ವಂದಿಸಿದರು.
ವರದಿ : ದುಂಡಪ್ಪ ಹೂಲಿ


