ಚೇಳೂರು: ತಾಲ್ಲೂಕಿನ ಸೋಮನಾಥಪುರ ಗ್ರಾಮ ಪಂಚಾಯತಿ ವ್ಯಾಪ್ತಿಯ ಚಿನ್ನಗಾನಪಲ್ಲಿ ಗ್ರಾಮದಲ್ಲಿ ಗುರುವಾರ ತಡರಾತ್ರಿ ಭಾರಿ ಬಿರುಗಾಳಿ ಸಹಿತ ಸುರಿದ ಮಳೆಗೆ ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ಬಿರುಗಾಳಿಯ ಆರ್ಭಟಕ್ಕೆ ಗ್ರಾಮದ ಹಲವೆಡೆ ಮರಗಳು, ವಿದ್ಯುತ್ ಕಂಬಗಳು ಹಾಗೂ ಟ್ರಾನ್ಸ್‌ಫಾರ್ಮರ್ ನೆಲಕ್ಕೆ ಉರುಳಿ ಬಿದ್ದಿದ್ದು, ಲಕ್ಷಾಂತರ ರೂಪಾಯಿ ಮೌಲ್ಯದ ಸಾರ್ವಜನಿಕ ಆಸ್ತಿಗೆ ನಷ್ಟ ಸಂಭವಿಸಿದೆ.
ಗುರುವಾರ ಮಧ್ಯರಾತ್ರಿ ಹಠಾತ್ತನೆ ಬೀಸಿದ ಭಾರಿ ಬಿರುಗಾಳಿಗೆ ಗ್ರಾಮದ ನಿವಾಸಿ ಶ್ರೀನಿವಾಸ ರೆಡ್ಡಿ ಎಂಬುವರ ಮನೆಯ ಮುಂದೆ ಇದ್ದ ಬೃಹತ್ ಮರಗಳು ಬುಡಸಮೇತ ಕಿತ್ತೊಯ್ದಿವೆ. ಮರಗಳು ಬೀಳುವ ರಭಸಕ್ಕೆ ಅಲ್ಲೇ ಇದ್ದ ವಿದ್ಯುತ್ ಟ್ರಾನ್ಸ್‌ಫಾರ್ಮರ್ ಹಾಗೂ ವಿದ್ಯುತ್ ಕಂಬಗಳು ಸಂಪೂರ್ಣವಾಗಿ ಧರೆಗೆ ಉರುಳಿವೆ. ಅದೃಷ್ಟವಶಾತ್ ಮಧ್ಯರಾತ್ರಿ ಯಾರು ಮನೆಯಿಂದ ಹೊರಗೆ ಬರದೇ ಇದ್ದುದರಿಂದ ಹಾಗೂ ರಸ್ತೆಯಲ್ಲಿ ಜನಸಂಚಾರ ಇಲ್ಲದ ಕಾರಣ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.
ಅನಿರೀಕ್ಷಿತವಾಗಿ ಸಂಭವಿಸಿದ ಈ ಪ್ರಕೃತಿ ವಿಕೋಪದಿಂದಾಗಿ ಇಡೀ ಗ್ರಾಮಕ್ಕೆ ವಿದ್ಯುತ್ ಸಂಪರ್ಕ ಸಂಪೂರ್ಣವಾಗಿ ಕಡಿತಗೊಂಡಿದೆ. ಟ್ರಾನ್ಸ್‌ಫಾರ್ಮರ್ ಜಖಂಗೊಂಡಿರುವುದರಿಂದ ಇಡೀ ಗ್ರಾಮ ಕತ್ತಲಲ್ಲಿ ಮುಳುಗುವಂತಾಗಿದೆ. ವಿದ್ಯುತ್ ಸಂಪರ್ಕ ಸ್ಥಗಿತಗೊಂಡ ಹಿನ್ನೆಲೆಯಲ್ಲಿ ಗ್ರಾಮದ ಕುಡಿಯುವ ನೀರಿನ ಪೂರೈಕೆ ಸಂಪೂರ್ಣ ಸ್ಥಗಿತಗೊಂಡಿದ್ದು, ಹನಿ ನೀರಿಗೂ ಗ್ರಾಮಸ್ಥರು ಪರದಾಡುವಂತಹ ಸ್ಥಿತಿ ನಿರ್ಮಾಣವಾಗಿತ್ತು.
ದುರಂತದ ವಿಷಯ ತಿಳಿಯುತ್ತಿದ್ದಂತೆ ಶುಕ್ರವಾರ ಬೆಳಿಗ್ಗೆಯೇ ಚಿನ್ನಗಾನಪಲ್ಲಿ ಗ್ರಾಮಕ್ಕೆ ಧಾವಿಸಿದ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ,ಕಾರ್ಯಾಚರಣೆ ಕೈಗೊಂಡು ಅಡ್ಡಲಾಗಿ ಬಿದ್ದಿದ್ದ ಬೃಹತ್ ಮರಗಳ ರೆಂಬೆ-ಕೊಂಬೆಗಳನ್ನು ಕತ್ತರಿಸಿ ತೆರವುಗೊಳಿಸಿದರು. ನೆಲಸಮವಾಗಿದ್ದ ವಿದ್ಯುತ್ ಕಂಬಗಳು ಮತ್ತು ಅಪಾಯಕಾರಿಯಾಗಿ ಬಿದ್ದಿದ್ದ ಟ್ರಾನ್ಸ್‌ಫಾರ್ಮರ್ ಅನ್ನು ಸರಿಪಡಿಸುವ ಕೆಲಸಕ್ಕೆ ಚಾಲನೆ ನೀಡಿದರು.
ವರದಿ :ಯಾರಬ್. ಎಂ.

