ಚಿಂಚೋಳಿ:ಕಲಬುರಗಿ ಜಿಲ್ಲೆ, ಚಿಂಚೋಳಿ ತಾಲೂಕಿನ ಸುಲಪೇಟ ಗ್ರಾಮದಲ್ಲಿರುವ ಸರ್ಕಾರಿ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕಲಬುರಗಿ ಮಾಜಿ ಸಂಸದರಾದ ಡಾ. ಉಮೇಶ್ ಜಾಧವ್ ಅವರು ದಿಢೀರ್ ಭೇಟಿ ನೀಡಿ, ಆಸ್ಪತ್ರೆಯಲ್ಲಿರುವ ಕುಂದುಕೊರತೆಗಳು ಹಾಗೂ ಸಾರ್ವಜನಿಕರು ಎದುರಿಸುತ್ತಿರುವ ಸಮಸ್ಯೆಗಳನ್ನು ಪರಿಶೀಲಿಸಿದರು.
ಸುಲಪೇಟ ಗ್ರಾಮವು ವೈದ್ಯಕೀಯ ಶಿಕ್ಷಣ ಸಚಿವರಾದ ಡಾ. ಶರಣ ಪ್ರಕಾಶ್ ಪಾಟೀಲ್ ಅವರ ಕ್ಷೇತ್ರಕ್ಕೆ ಒಳಪಟ್ಟಿದ್ದರೂ, ಸಮುದಾಯ ಆರೋಗ್ಯ ಕೇಂದ್ರದಲ್ಲಿ ಸಮರ್ಪಕ ವೈದ್ಯರ ಕೊರತೆ ಇರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಆರೋಗ್ಯ ಕೇಂದ್ರದಲ್ಲಿ ಅಗತ್ಯ ವೈದ್ಯರು ಹಾಗೂ ಸಿಬ್ಬಂದಿಯನ್ನು ನೇಮಕ ಮಾಡಬೇಕು. ಸಾರ್ವಜನಿಕರಿಗೆ ಸಮರ್ಪಕ ಆರೋಗ್ಯ ಸೇವೆ ದೊರೆಯುವಂತೆ ಸಂಬಂಧಪಟ್ಟ ಸಚಿವರು ಹಾಗೂ ಅಧಿಕಾರಿಗಳು ತಕ್ಷಣ ಗಮನಹರಿಸಬೇಕು ಎಂದು ಮಾಜಿ ಸಂಸದ ಡಾ. ಉಮೇಶ್ ಜಾಧವ್ ಒತ್ತಾಯಿಸಿದರು.
ಆಸ್ಪತ್ರೆಯಲ್ಲಿ ಹಲವು ಮೂಲಭೂತ ಸೌಲಭ್ಯಗಳ ಕೊರತೆಯಿದೆ ಎಂದು ಸಾರ್ವಜನಿಕರು ಮಾಜಿ ಸಂಸದರ ಗಮನಕ್ಕೆ ತಂದರು. ವೈದ್ಯರ ಕೊಠಡಿಗಳು ಖಾಲಿಯಾಗಿದ್ದು, ಚುಚ್ಚುಮದ್ದು ನೀಡುವ ಕೊಠಡಿಯಲ್ಲಿ ಅಗತ್ಯ ಔಷಧಗಳ ಕೊರತೆ ಇದೆ. ಹೆರಿಗೆ ಕೊಠಡಿಯಲ್ಲಿ ಅಗತ್ಯ ಸಲಕರಣೆಗಳಿಲ್ಲ. ಸುಮಾರು ಎರಡು ವರ್ಷಗಳ ಹಿಂದೆ ನಿರ್ಮಾಣಗೊಂಡ ಕಟ್ಟಡದಲ್ಲಿಯೇ ಮಳೆ ಬಂದಾಗ ನೀರು ಸೋರಿಕೆಯಾಗುತ್ತಿದೆ ಎಂದು ಸಾರ್ವಜನಿಕರು ದೂರಿದರು.
ಆರೋಗ್ಯ ಕೇಂದ್ರಕ್ಕೆ ರೋಗಿಗಳು ಬಂದಾಗ ಅವರಿಗೆ ಸೂಕ್ತ ಚಿಕಿತ್ಸೆ ನೀಡದೆ ಬೇರೆಡೆಗೆ ಕಳುಹಿಸಲಾಗುತ್ತಿದೆ. ಕನಿಷ್ಠ ಪ್ರಥಮ ಚಿಕಿತ್ಸೆಯೂ ಸಮರ್ಪಕವಾಗಿ ದೊರೆಯುತ್ತಿಲ್ಲ ಎಂದು ಸಾರ್ವಜನಿಕರು ಅಳಲು ತೋಡಿಕೊಂಡರು.
ಸಾರ್ವಜನಿಕರ ಅಹವಾಲುಗಳನ್ನು ಆಲಿಸಿದ ಡಾ. ಉಮೇಶ್ ಜಾಧವ್, ಆರೋಗ್ಯ ಕೇಂದ್ರದ ಅವ್ಯವಸ್ಥೆ ಹಾಗೂ ವೈದ್ಯರ ಕೊರತೆ ಕುರಿತು ಅಸಮಾಧಾನ ವ್ಯಕ್ತಪಡಿಸಿದರು. “ಸಾರ್ವಜನಿಕರಿಗೆ ಮೂಲಭೂತ ಆರೋಗ್ಯ ಸೇವೆ ದೊರೆಯಬೇಕು. ವೈದ್ಯರು ಹಾಗೂ ಅಗತ್ಯ ಸಿಬ್ಬಂದಿಯನ್ನು ನೇಮಕ ಮಾಡಿ ಆರೋಗ್ಯ ಕೇಂದ್ರವನ್ನು ಸಮರ್ಪಕವಾಗಿ ನಿರ್ವಹಿಸಬೇಕು. ಈ ವಿಚಾರದಲ್ಲಿ ಸರ್ಕಾರ ಮಲತಾಯಿ ಧೋರಣೆ ತೋರಬಾರದು” ಎಂದು ಒತ್ತಾಯಿಸಿದರು.ಆರೋಗ್ಯ ಕೇಂದ್ರದ ಸಮಸ್ಯೆಗಳನ್ನು ತಕ್ಷಣ ಪರಿಹರಿಸಿ, ಗ್ರಾಮೀಣ ಭಾಗದ ಬಡವರು ಹಾಗೂ ಸಾಮಾನ್ಯ ಜನರಿಗೆ ಸ್ಥಳೀಯವಾಗಿಯೇ ಉತ್ತಮ ಚಿಕಿತ್ಸೆ ದೊರೆಯುವಂತೆ ಕ್ರಮ ಕೈಗೊಳ್ಳಬೇಕು ಎಂದು ಅವರು ಹೇಳಿದರು.


