ಹಂಪಿ: ವಿಶ್ವವಿಖ್ಯಾತ ಹಂಪಿಯ (Hampi) ಪುರಾತತ್ವ ಇತಿಹಾಸಕ್ಕೆ ಮತ್ತೊಂದು ಮಹತ್ವದ ಸೇರ್ಪಡೆಯಾಗಿದೆ. ಜೈನ ದೇವಸ್ಥಾನ ಸಂಕೀರ್ಣದ ಸಮೀಪ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ (ASI) ನಡೆಸುತ್ತಿರುವ ಉತ್ಖನನದಲ್ಲಿ (Exavation) ಅಪರೂಪದ ಎರಡು ಶಿಲ್ಪಗಳು ಪತ್ತೆಯಾಗಿವೆ.
ನಾಗಿಣಿ ಹಾಗೂ ಗರುಡನನ್ನು ಹೋಲುವ ಶಿಲ್ಪಗಳು ಪತ್ತೆಯಾಗಿರುವುದು ಗಮನ ಸೆಳೆದಿದೆ.ಪತ್ತೆಯಾದ ಶಿಲ್ಪಗಳ ಪೈಕಿ ಒಂದರಲ್ಲಿ ಮಾನವ ಹಾಗೂ ಸರ್ಪದ ಲಕ್ಷಣಗಳನ್ನು ಹೊಂದಿರುವ ಸ್ತ್ರೀ ರೂಪ ಕಂಡುಬಂದಿದ್ದು, ಇದನ್ನು ನಾಗಿಣಿ ಶಿಲ್ಪ ಎಂದು ಗುರುತಿಸಲಾಗಿದೆ. ಮತ್ತೊಂದು ಶಿಲ್ಪವು ತಲೆಯ ಭಾಗ ಕಾಣದ ಹದ್ದಿನ ಆಕೃತಿಯಲ್ಲಿದ್ದು, ಇದನ್ನು ಪೌರಾಣಿಕ ಗರುಡನ ಶಿಲ್ಪ ಎಂದು ಗುರುತಿಸಲಾಗಿದೆ.
ಗರುಡನ ಶಿಲ್ಪ ಸುಮಾರು 32 ಸೆಂ.ಮೀ. ಅಗಲ ಮತ್ತು 37 ಸೆಂ.ಮೀ. ಉದ್ದವಿದ್ದರೆ, ನಾಗಿಣಿ ಶಿಲ್ಪ 30 ಸೆಂ.ಮೀ. ಅಗಲ ಹಾಗೂ 51 ಸೆಂ.ಮೀ. ಉದ್ದವಿದೆ. ಎರಡೂ ಶಿಲ್ಪಗಳು ತುಸು ಉತ್ತಮ ಸ್ಥಿತಿಯಲ್ಲಿದ್ದು, ಉತ್ಖನನದ ಸ್ಥಳದಲ್ಲೇ ಅವುಗಳ ಕುರಿತು ಪುರಾತತ್ವ ದಾಖಲೀಕರಣ ನಡೆಯುತ್ತಿದೆ.
ಹಂಪಿ ವೃತ್ತದ ಅಧೀಕ್ಷಕ ಪುರಾತತ್ವಶಾಸ್ತ್ರಜ್ಞ ಕೆ. ರಾಮಕೃಷ್ಣ ರೆಡ್ಡಿ ಅವರ ಪ್ರಕಾರ, ಹೊಸದಾಗಿ ದೊರೆತಿರುವ ಶಿಲ್ಪಗಳು ಹಂಪಿಯ ಪುರಾತತ್ವ ದಾಖಲೆಗಳಿಗೆ ಮಹತ್ವದ ಸೇರ್ಪಡೆಯಾಗಿವೆ. ಅವುಗಳ ಶಿಲ್ಪಶೈಲಿ, ಪತ್ತೆಯಾದ ಸ್ಥಳ ಹಾಗೂ ಸುತ್ತಮುತ್ತಲಿನ ವಾಸ್ತುಶಿಲ್ಪದೊಂದಿಗೆ ಇರುವ ಸಂಬಂಧವನ್ನು ತಜ್ಞರು ಪರಿಶೀಲಿಸಲಿದ್ದಾರೆ.
ವಿಜಯನಗರ ಸಾಮ್ರಾಜ್ಯದ ರಾಜಧಾನಿಯಾಗಿದ್ದ ಹಂಪಿಯಲ್ಲಿ ವಿವಿಧ ಧಾರ್ಮಿಕ ಹಾಗೂ ಕಲಾ ಪರಂಪರೆಗಳ ಕುರುಹುಗಳು ಕಂಡುಬರುತ್ತವೆ.
ಹಿಂದೂ ಮತ್ತು ಜೈನ ಧಾರ್ಮಿಕ ಪರಂಪರೆಗಳಿಗೆ ಸಂಬಂಧಿಸಿದ ಹಲವು ಸ್ಮಾರಕಗಳು, ಶಿಲ್ಪಗಳು ಹಾಗೂ ಕಟ್ಟಡಗಳ ಅವಶೇಷಗಳು ಇಲ್ಲಿವೆ.
ಹೀಗಾಗಿ ಜೈನ ದೇವಸ್ಥಾನದ ಸಮೀಪ ದೊರೆತಿರುವ ನಾಗಿಣಿ ಮತ್ತು ಗರುಡನ ಶಿಲ್ಪಗಳು ಆ ಕಾಲದ ಸಾಂಸ್ಕೃತಿಕ ಸಂಪರ್ಕಗಳ ಬಗ್ಗೆ ಹೊಸ ಮಾಹಿತಿಯನ್ನು ನೀಡುವ ಸಾಧ್ಯತೆಯಿದೆ.


