ತುರುವೇಕೆರೆ : ಕಾಂಗ್ರೆಸ್ ಪಕ್ಷದ ಕಛೇರಿ ನಿರ್ಮಾಣಕ್ಕೆ ನಿವೇಶನ ಮಂಜೂರು ಮಾಡಿದರೆ ಪಟ್ಟಣ ಪಂಚಾಯ್ತಿ ವತಿಯಿಂದ ಸಹಸ್ರಾರು ನಾಗರೀಕರೊಡನೆ ಉಗ್ರ ಪ್ರತಿಭಟನೆ ನಡೆಸಲಾಗುವುದು ಎಂದು ನಾಗರೀಕ ರಕ್ಷಣಾ ವೇದಿಕೆ ಸಂಚಾಲಕ ನವೀನ್ ಬಾಬು ಎಚ್ಚರಿಸಿದರು.
ನಿವೇಶನ ನೀಡುವಂತೆ ಪಪಂಗೆ ಬ್ಲಾಕ್ ಕಾಂಗ್ರೆಸ್ ನೀಡಿದ್ದ ಅರ್ಜಿಗೆ ಆಕ್ಷೇಪಣೆ ಸಲ್ಲಿಸಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಪಟ್ಟಣ ವ್ಯಾಪ್ತಿಯಲ್ಲಿ ಸಾಕಷ್ಟು ಅಂಗನವಾಡಿಗಳು ಹಾಗೂ ಸರ್ಕಾರಿ ಕಛೇರಿಗಳು ಬಾಡಿಗೆ ಕಟ್ಟಡದಲ್ಲಿದೆ. ನೂರಾರು ಕುಟುಂಬಗಳು ನಿವೇಶನ ದೊರೆತರೆ ಪುಟ್ಟದಾದ ಸ್ವಂತ ಗುಡಿಸಲು ನಿರ್ಮಿಸಿಕೊಳ್ಳುವುಕ್ಕಾಗಿ ಆಸೆಗಣ್ಣಿನಿಂದ ಕಾಯುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ರಾಜಕೀಯ ಪಕ್ಷವೊಂದಕ್ಕೆ ನಿವೇಶನ ನೀಡುವುದು ಸರಿಯಲ್ಲ ಎಂದರು.
ರಾಜಕೀಯ ಪಕ್ಷಕ್ಕೆ ನಿವೇಶನ ನೀಡುವದಕ್ಕೆ ಪಟ್ಟಣದ ನಾಗರೀಕರ ವಿರೋಧವಿದೆ. ನಾಗರೀಕರ ಆಕ್ಷೇಪಣೆ, ವಿರೋಧ ಕಡೆಗಣಿಸಿ ಒತ್ತಡಕ್ಕೆ ಮಣಿದು ನಿವೇಶನ ಮಂಜೂರು ಮಾಡಿದರೆ ಪಟ್ಟಣದ ಸಹಸ್ರಾರು ನಾಗರೀಕರೊಡನೆ ಪಟ್ಟಣ ಪಂಚಾಯ್ತಿ ಕಛೇರಿ ಎದುರು ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು.
ಪಟ್ಟಣ ಪಂಚಾಯ್ತಿ ಕಂದಾಯ ನಿರೀಕ್ಷಕ ಪ್ರಶಾಂತ್ ಭದ್ರಣ್ಣನವರ್ ಅವರಿಗೆ ನಾಗರೀಕ ರಕ್ಷಣಾ ವೇದಿಕೆ ವತಿಯಿಂದ ರಾಜಕೀಯ ಪಕ್ಷಕ್ಕೆ ನಿವೇಶನ ನೀಡಬಾರದೆಂದು ಆಕ್ಷೇಪಣಾ ಪತ್ರ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ನಾಗರೀಕ ರಕ್ಷಣಾ ವೇದಿಕೆಯ ತೀರ್ಥಕುಮಾರ್, ಲೋಕೇಶ್, ಗಿರೀಶ್, ಕೃಷ್ಣಮೂರ್ತಿ, ಹೇಮಂತ್, ನಯಾಜ್, ಅಭಿನಂದನ್, ಮೋಕ್ಷಿತ್ ಮುಂತಾದವರು ಉಪಸ್ಥಿತರಿದ್ದರು.
ವರದಿ : ಗಿರೀಶ್ ಕೆ ಭಟ್

