ಬೆಳಗಾವಿ: ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಸುತಗಟ್ಟಿ ಗ್ರಾಮದಲ್ಲಿ ಧಾರ್ಮಿಕ ಸೌಹಾರ್ದತೆ ಮತ್ತು ಭಾವೈಕ್ಯತೆ ಮೆರೆವ ದೃಶ್ಯಗಳು ಕಂಡುಬಂದವು. ಗ್ರಾಮದಲ್ಲಿ ನೂತನವಾಗಿ ನಿರ್ಮಾಣಗೊಂಡ 'ಹಸೇನ್ ಹುಸೇನ್ ಪಂಜಾ ಮಸೀದಿ'ಯು ಹಿಂದೂ-ಮುಸ್ಲಿಂ ಧರ್ಮ ಗುರುಗಳು ಹಾಗೂ ಗಣ್ಯಮಾನ್ಯರ ಸಮ್ಮುಖದಲ್ಲಿ ಅತ್ಯಂತ ಅದ್ದೂರಿಯಾಗಿ ಲೋಕಾರ್ಪಣೆಯಾಯಿತು.
ಕಾರ್ಯಕ್ರಮದ ವಿಶೇಷತೆ:
ಮಸೀದಿಯ ಉದ್ಘಾಟನಾ ಸಮಾರಂಭವು ಧಾರ್ಮಿಕ ವಿಧಿವಿಧಾನಗಳೊಂದಿಗೆ ನೆರವೇರಿತು. ಪರಮಪೂಜ್ಯ ವೇದಮೂರ್ತಿ ವಿರುಪಾಕ್ಷಯ್ಯ ಮಹಾಸ್ವಾಮಿಗಳು (ಬಂಗಾರ ಅಜ್ಜನವರ ಮಠ, ಏಣಗಿ), ಮುಸ್ಲಿಂ ಧರ್ಮ ಗುರುಗಳಾದ ಸೈಯದ್ ಮುರ್ಶದ್ ಪೀರಜಾದೆ (ಯಕ್ಕುಂಡಿ) ಹಾಗೂ ಸುಲ್ತಾನ್ ಅಲಿಶಾ ದುಪದಾಳ (ಯಕ್ಕುಂಡಿ) ಅವರ ದಿವ್ಯ ಸಾನಿಧ್ಯದಲ್ಲಿ ಕಾರ್ಯಕ್ರಮ ಜರುಗಿತು.
ದೇವರ ಗದ್ದಿಗೆಯನ್ನು ಪೂಜಿಸುವ ಮೂಲಕ ಹಾಗೂ ರಿಬ್ಬನ್ ಕತ್ತರಿಸುವ ಮೂಲಕ ಹಿಂದೂ ಮತ್ತು ಮುಸ್ಲಿಂ ಧರ್ಮ ಗುರುಗಳು ಒಟ್ಟಾಗಿ ಮಸೀದಿಯನ್ನು ಉದ್ಘಾಟಿಸಿದ್ದು, ಈ ಭಾಗದ ಸಾಮರಸ್ಯಕ್ಕೆ ಸಾಕ್ಷಿಯಾಯಿತು.
ಗಣ್ಯರ ಉಪಸ್ಥಿತಿ:
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಬಿಜೆಪಿಯ ಸವದತ್ತಿ ಮುಖಂಡರಾದ ಮಡಿವಾಳಪ್ಪ ಬಿದರಗಡ್ಡಿ, ಮಡಿವಾಳಪ್ಪ ಪೆಂಟೇದ (ಮಲ್ಲಿಕಾರ್ಜುನ ಆಗ್ರೋ ಕೇಂದ್ರ, ಸವದತ್ತಿ), ಬಸವರಾಜ ಹರ್ಲಾಪುರ, ಅಪ್ಪಾಸಾಬ ಜಗ್ಲಿಸಾಬ ಮಕಾನದಾರ್, ಮಹ್ಹದರಪಿ ಮುಜಾವರ, ಈರಯ್ಯಾ ಸಂಗಯ್ಯ ಹಿರೆಮಠ, ವಿನೋದ ದೇಶಪಾಂಡೆ ಹಾಗೂ ಜನಾಬ ದಿಲಾವರಸಾಬ ಅರವಳ್ಳಿ ಸೇರಿದಂತೆ ಅನೇಕ ಗಣ್ಯರು ಭಾಗವಹಿಸಿದ್ದರು.
ಸೌಹಾರ್ದದ ಊಟ:
ಉದ್ಘಾಟನೆಯ ನಂತರ ನಡೆದ ವೇದಿಕೆ ಕಾರ್ಯಕ್ರಮದಲ್ಲಿ ಅತಿಥಿಗಳನ್ನು ಗೌರವಿಸಲಾಯಿತು. ಕಾರ್ಯಕ್ರಮದ ಮುಕ್ತಾಯದ ನಂತರ, ಗ್ರಾಮದ ಸಂಗಮೇಶ್ವರ ಅಜ್ಜನ ದೇವಸ್ಥಾನದ ಮುಂದೆ ಸಾರ್ವಜನಿಕರಿಗಾಗಿ ಅದ್ದೂರಿಯಾದ ಅನ್ನ ಪ್ರಸಾದದ ವ್ಯವಸ್ಥೆಯನ್ನು ಮಾಡಲಾಗಿತ್ತು. ಈ ಐತಿಹಾಸಿಕ ಕ್ಷಣಕ್ಕೆ ಗ್ರಾಮದ ಹಿರಿಯರು, ಯುವಕರು ಹಾಗೂ ತಾಯಂದಿರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು. ಕಾರ್ಯಕ್ರಮದ ನಿರೂಪಣೆಯನ್ನು ಎಮ್ ಡಿ ಬಾವಾಖಾನ್ ಶಿಕ್ಷಕರು ನೆರವೇರಿಸಿದರು.
ವರದಿ ದುಂಡಪ್ಪ ಹೂಲಿ


