ಬೆಳಗಾವಿ: ಪುಣೆ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಎರಡು ಲಾರಿಗಳ ನಡುವೆ ಭೀಕರ ಅಪಘಾತ ಸಂಭವಿಸಿ ಎರಡೂ ಲಾರಿಗಳು ಹೊತ್ತಿ ಉರಿದ ಘಟನೆ ನಡೆದಿದೆ.
ಲಾರಿಗೆ ಹಾಲಿನ ಟ್ಯಾಂಕರ್ ಡಿಕ್ಕಿ ಹೊಡೆದ ಪರಿಣಾಮ ಹೆದ್ದಾರಿಯಲ್ಲೇ ಎರಡೂ ಲಾರಿಗಳು ಹೊತ್ತಿ ಉರಿದಿವೆ.
ಬೆಳಗಾವಿ ಜಿಲ್ಲೆಯ ಎಂ.ಕೆ ಹುಬ್ಬಳ್ಳಿ ಪಟ್ಟಣದ ಬಳಿ ಪುಣೆ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಈ ಘಟನೆ ನಡೆದಿದೆ.
ಗೋವಿನ ಜೋಳದ ಮೂಟೆ ಹೊತ್ತು ಸಾಗುತ್ತಿದ್ದ ಲಾರಿಗೆ ಹಾಲಿನ ಟ್ಯಾಂಕರ್ ಡಿಕ್ಕಿ ಹೊಡೆದಿದೆ. ಅಪಘಾತದ ಪರಿಣಾಮ ಎರಡೂ ಲಾರಿಗಳಲ್ಲಿ ಬೆಂಕಿ ಕಾಣಿಸಿಕೊಂಡು ಹೊತ್ತಿ ಉರಿದಿದೆ. ಘಟನೆಯಲ್ಲಿ ಅದೃಷ್ಟವಶಾತ್ ಲಾರಿ ಚಾಲಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಘಟನೆಯಿಂದಾಗಿ ಕೆಲಹೊತ್ತು ರಾಷ್ಟ್ರೀಯ ಹೆದ್ದಾರಿ ಮೇಲೆ ವಾಹನ ಸಂಚಾರ ಅಸ್ತವ್ಯಸ್ತಗೊಂಡಿತ್ತು. ಘಟನಾ ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ಭೇಟಿ ನೀಡಿ ಬೆಂಕಿ ನಂದಿಸಲು ಹರಸಾಹಸಪಟ್ಟಿದ್ದಾರೆ. ಕಿತ್ತೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.


