ಬಾಗಲಕೋಟೆ : ಜಿಲ್ಲೆಯ ಬಾದಾಮಿ ತಹಶೀಲ್ದಾರ್ ಕಚೇರಿಯಲ್ಲಿ ನಡೆದಿದೆ ಎನ್ನಲಾದ ಭಾರಿ ಅಕ್ರಮದ ಹಿನ್ನೆಲೆಯಲ್ಲಿ ಲೋಕಾಯುಕ್ತ (Lokayukta) ಅಧಿಕಾರಿಗಳು ದಿಢೀರ್ ದಾಳಿ ನಡೆಸಿದ್ದಾರೆ.
2009ರಲ್ಲಿ ಮಲಪ್ರಭಾ ನದಿಯ ಪ್ರವಾಹದಿಂದ (flood) ತೊಂದರೆಗೀಡಾಗಿದ್ದ ತಮಿನಾಳ ಗ್ರಾಮದ ಸಂತ್ರಸ್ತರಿಗೆ ಮೀಸಲಾಗಿದ್ದ ಸೌಲಭ್ಯಗಳನ್ನು, ಅರ್ಹರಲ್ಲದವರಿಗೆ ಹಂಚಿಕೆ ಮಾಡಲಾಗಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ.
ವಾಸ್ತವವಾಗಿ ಪರಿಹಾರ ಪಡೆಯಬೇಕಿದ್ದ ಸುಮಾರು 38 ಮಂದಿ ನೈಜ ಸಂತ್ರಸ್ತರನ್ನು ಕೈಬಿಟ್ಟು, ಬದಲಿಗೆ ಅರ್ಹತೆಯಿಲ್ಲದ 62 ಕುಟುಂಬಗಳಿಗೆ ಅಕ್ರಮವಾಗಿ ಮನೆ ಮತ್ತು ನಿವೇಶನಗಳನ್ನು ನೀಡಲಾಗಿದೆ ಎಂಬುದು ಸ್ಥಳೀಯರ ದೂರು. ಈ ಅನ್ಯಾಯದ ವಿರುದ್ಧ ನೊಂದ ಗ್ರಾಮಸ್ಥರು ಲೋಕಾಯುಕ್ತಕ್ಕೆ ದೂರು ನೀಡಿದ ಬೆನ್ನಲ್ಲೇ, ನ್ಯಾಯಾಲಯದ ಶೋಧನಾ ವಾರಂಟ್ ಪಡೆದ ಲೋಕಾಯುಕ್ತ ಡಿವೈಎಸ್ಪಿ ನೇತೃತ್ವದ ತಂಡ ಕಚೇರಿಯ ಮೇಲೆ ದಾಳಿ ನಡೆಸಿದೆ.
ಈ ದಾಳಿಯ ಸಂದರ್ಭದಲ್ಲಿ ಕಚೇರಿಯಲ್ಲಿದ್ದ ಮನೆ ಹಂಚಿಕೆಯ ಕಡತಗಳು, ಫಲಾನುಭವಿಗಳ ಪಟ್ಟಿ ಹಾಗೂ ಇತರ ಮಹತ್ವದ ದಾಖಲೆಗಳನ್ನು ವಶಕ್ಕೆ ಪಡೆದ ಅಧಿಕಾರಿಗಳು, ಅವುಗಳ ಪರಿಶೀಲನೆಯನ್ನು ಕೈಗೊಂಡಿದ್ದಾರೆ.
ಈ ಅಕ್ರಮದಲ್ಲಿ ಭಾಗಿಯಾಗಿರುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ತನಿಖಾ ತಂಡ ತಿಳಿಸಿದೆ. ಪರಿಹಾರದ ಹೆಸರಿನಲ್ಲಿ ನಡೆದ ಈ ಹಗರಣವು ಇದೀಗ ಬಾದಾಮಿ ಭಾಗದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.


