ಬೆಂಗಳೂರು: ಡಿ.ಕೆ ಶಿವಕುಮಾರ್ ನೇತೃತ್ವದ ಸರ್ಕಾರದಲ್ಲಿ ಸಚಿವರ ಖಾತೆ ಹಂಚಿಕೆ ವಿಚಾರವಾಗಿ ಅಸಮಾಧಾನ ಸ್ಫೋಟಗೊಂಡಿದೆ.
ನಗರಾಭಿವೃದ್ಧಿ ಖಾತೆ ಸಿಕ್ಕಿಲ್ಲ ಎಂದು ರಾಮಲಿಂಗಾರೆಡ್ಡಿ ರಾಜೀನಾಮೆ ನೀಡಿದ್ದಾರೆ. ಇದರ ಬೆನ್ನಲ್ಲೇ ತನಗೆ ಆಹಾರ ಖಾತೆ ಸಿಕ್ಕಿದ್ದಕ್ಕೆ ಸಚಿವ ಕೆ.ಹೆಚ್.ಮುನಿಯಪ್ಪ ಕೂಡ ಅಸಮಾಧಾನ ವ್ಯಕ್ತಪಡಿಸಿದ್ದು, ರಾಜೀನಾಮೆಗೆ ಮುಂದಾಗಿದ್ದರು.
ಸಮಾಜಕಲ್ಯಾಣ ಅಥವಾ ಕೃಷಿ ಖಾತೆಯನ್ನು ನೀಡುವಂತೆ ಮುನಿಯಪ್ಪ ಬೇಡಿಕೆ ಇಟ್ಟಿದ್ದರು. ರಾಮಲಿಂಗಾರೆಡ್ಡಿ ರಾಜೀನಾಮೆ ಬೆನ್ನಲ್ಲೇ ಮುನಿಯಪ್ಪ ಕೂಡ ರಾಜೀನಾಮೆ ಚಿಂತನೆ ನಡೆಸುತ್ತಿದ್ದಂತೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹಾಗೂ ಹೈಕಮಾಂಡ್ ನಾಯಕರು ಮುನಿಯಪ್ಪ ಅವರನ್ನು ಕರೆದು ಮಾತುಕತೆ ನಡೆಸಿದ್ದಾರೆ.
ಸಚಿವ ಕೆ.ಹೆಚ್. ಮುನಿಯಪ್ಪ ಬಹಿರಂಗವಾಗಿಯೇ ಖಾತೆ ವಿಚಾರವಾಗಿ ಅಸಮಾಧಾನ ಹೊರಹಾಕುತ್ತಿದ್ದಂತೆ ರಾಹುಲ್ ಗಾಂಧಿ ಖುದ್ದು ಮುನಿಯಪ್ಪ ಅವರನ್ನು ಕರೆದು ಚರ್ಚಿಸಿದ್ದಾರೆ. ಖಾತೆ ವಿಚಾರವಾಗಿ ಭರವಸೆಗಳನ್ನು ನೀಡಿದ್ದಾರೆ. ರಾಹುಲ್ ಗಾಂಧಿ ಜೊತೆ ಚರ್ಚೆ ಬಳಿಕ ಮುನಿಯಪ್ಪ ಖುಷಿಯಾಗಿದ್ದಾರೆ.
ಮಲ್ಲಿಕಾರ್ಜು ಖರ್ಗೆ ಅವರ ನಾಮಪತ್ರ ಸಲ್ಲಿಕೆಗೆಂದು ಬೆಂಗಳೂರಿಗೆ ಆಗಮಿಸಿದ್ದ ರಾಹುಲ್ ಗಾಂಧಿ ಜೊತೆ ಸಿಎಂ ಡಿ.ಕೆ ಶಿವಕುಮಾರ್ ಸಚಿವರ ಖಾತೆ ಅಸಮಾಧಾನ ವಿಚಾರ ಪ್ರಸ್ತಾಪಿಸಿದರು.
ರಾಮಲಿಂಗಾರೆಡ್ಡಿ ರಾಜೀನಾಮೆ ನೀಡಿರುವ ಬಗ್ಗೆ ರಾಹುಲ್ ಗಮನಕ್ಕೆ ತಂದಿದ್ದಾರೆ. ಅಲ್ಲದೇ ಇದೇ ವೇಳೆ ಕೆ ಹೆಚ್ ಮುನಿಯಪ್ಪ ಅವರ ಅಸಮಾಧಾನವೂ ಸಹ ಚರ್ಚೆಯಾಗಿದೆ.
ಬಳಿಕ ಮುನಿಯಪ್ಪ ಸಹ ಖುದ್ದು ರಾಹುಲ್ ಗಾಂಧಿ ಅವರನ್ನು ಭೇಟಿ ಮಾಡಿ ಅಳಲು ತೋಡಿಸಿಕೊಂಡಿದ್ದು, ಈ ವೇಳೆ ಗೊಂದಲ ಸರಿಪಡಿಸುವುದಾಗಿ ಭರವಸೆ ನೀಡಿದ್ದಾರೆ ಎಂದು ತಿಳಿದುಬಂದಿದೆ. ಬಳಿಕ ಸಚಿವ ಮುನಿಯಪ್ಪ ಸಮಾಧಾನಗೊಂಡಿದ್ದು, ರಾಜೀನಾಮೆಯಿಂದ ಹಿಂದೆ ಸರಿದಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಸಚಿವ ಮುನಿತಪ್ಪ, ರಾಹುಲ್ ಗಾಂಧಿ, ಕೆಸಿ ವೇಣುಗೋಪಾಲ್, ರಣದೀಪ್ ಸಿಂಗ್ ಸುರ್ಜೇವಾಲ ಅವರನ್ನು ಭೇಟಿಯಾಗಿದ್ದು, ರಾಹುಲ್ ಗಾಂಧಿ ಗೊಂದಲ ಸರಿಪಡಿಸುವುದಾಗಿ ಹೇಳಿದ್ದಾರೆ. ಹೀಗಾಗಿ ಐ ಆಯಮ್ ಹ್ಯಾಪಿ. ಯಾವುದೇ ಸಮಸ್ಯೆಯಿಲ್ಲ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.
ಕಳೆದ ಬಾರಿ ಸಿದ್ದರಾಮಯ್ಯನವರ ಸರ್ಕಾರದ ಅವಧಿಯಲ್ಲಿ ಆಹಾರ ಇಲಾಖೆ ಖಾತೆಯನ್ನು ಮುನಿಯಪ್ಪನವರಿಗೆ ನೀಡಲಾಗಿತ್ತು. ಇದೀಗ ಡಿಕೆ ಶಿವಕುಮಾರ್ ಸಂಪುಟದಲ್ಲೂ ಸಹ ಅದೇ ಖಾತೆ ನೀಡಲಾಗಿದೆ.
ಇದರಿಂದ ಅಸಮಾಧಾನಗೊಂಡಿದ್ದ ಮುನಿಯಪ್ಪ, ಬಹಿರಂಗವಾಗಿ ಬೇಸರ ಹೊರಹಾಕಿದ್ದರು. ಆಹಾರ ಇಲಾಖೆ ಬೇಡ ಸಮಾಜ ಕಲ್ಯಾಣ ಅಥವಾ ಕೃಷಿ ಇಲಾಖೆ ನೀಡುವಂತೆ ಒತ್ತಾಯಿಸಿದ್ದರು.

