ತುರುವೇಕೆರೆ : ತಾಲ್ಲೂಕಿನ ಕನ್ನಡ ಸಾಹಿತ್ಯ ಪರಿಷತ್ ಮಾಯಸಂದ್ರ ಹೋಬಳಿ ಘಟಕದ ವತಿಯಿಂದ ಗ್ರಾಮದ ಕನ್ನಡ ಭವನದಲ್ಲಿ 71ನೇ ಕನ್ನಡ ರಾಜ್ಯೋತ್ಸವವನ್ನು ಆಚರಿಸಲಾಯಿತು.
ಘಟಕದ ಸಂಸ್ಥಾಪಕ ಅಧ್ಯಕ್ಷ ಎನ್.ಆರ್.ಜಯರಾಮ್ ಧ್ವಜಾರೋಹಣ ನೆರವೇರಿಸಿ ಮಾತನಾಡಿ, ಕನ್ನಡ ನಾಡು ಸಂಸ್ಕೃತಿ, ಸಂಸ್ಕಾರದಲ್ಲಿ ವಿಶ್ವದಲ್ಲೇ ವಿಶೇಷ ಸ್ಥಾನ ಪಡೆದಿದೆ. ಕನ್ನಡ ಭಾಷೆಗೆ ಸಾವಿರಾರು ವರ್ಷಗಳ ಇತಿಹಾಸವಿದೆ. ಕನ್ನಡ ನೆಲ, ಜಲ, ಭಾಷೆಗಾಗಿ ಹಲವರು ತ್ಯಾಗ ಮಾಡಿದ್ದಾರೆ. ಕನ್ನಡ ನಾಡಿನ ಏಕೀಕರಣಕ್ಕಾಗಿ ಸಾಕಷ್ಟು ಮಹನೀಯರು ಶ್ರಮಿಸಿದ್ದಾರೆ. ಕನ್ನಡ ಭಾಷೆಯ ಉಳಿವಿಗಾಗಿ, ಅಭಿವೃದ್ದಿಗಾಗಿ ಪ್ರತಿಯೊಬ್ಬ ಕನ್ನಡಿಗರೂ ಕಂಕಣಬದ್ಧರಾಗಬೇಕಿದೆ ಎಂದರು.
ಮಾಯಸಂದ್ರ ಹೋಬಳಿ ಘಟಕದ ಅಧ್ಯಕ್ಷ ಮುನಿರಾಜು ಮಾತನಾಡಿ, ಕನ್ನಡ ರಾಜ್ಯೋತ್ಸವ ಎಂಬುದು ನವೆಂಬರ್ 01 ರಂದು ನಡೆಸುವ ಆಚರಣೆಯಾಗದೆ ಪ್ರತಿನಿತ್ಯ ಆಚರಿಸುವ ಪ್ರತಿ ಮನೆಯ ಹಬ್ಬವಾಗಬೇಕು. ಕನ್ನಡ ನಮ್ಮ ಉಸಿರಲ್ಲಿ ಬೆರೆತಿರುವ ಮಾತೃಭಾಷೆಯಾಗಿದೆ. ತಾಯ್ನೆಲ, ತಾಯಿನುಡಿಗೆ ಹೆಚ್ಚಿನ ಗೌರವವನ್ನು ನೀಡಬೇಕು. ಕನ್ನಡ ಎಂಬುದು ಕೇವಲ ಭಾಷೆಯಲ್ಲ ನಮ್ಮ ಬದುಕು ಎಂದರು.
ಈ ಸಂದರ್ಭದಲ್ಲಿ ಸೌರಭ ಕಾನ್ವೆಂಟಿನ ಕಾರ್ಯದರ್ಶಿ ಕಲ್ಪನಾಮುನಿರಾಜು, ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆಯ ಅಧ್ಯಕ್ಷ ಬಾಲಾಜಿ, ಮುಖ್ಯ ಶಿಕ್ಷಕ ಸಿದ್ದಲಿಂಗಯ್ಯ, ಉರ್ದುಶಾಲೆಯ ಮುಖ್ಯ ಶಿಕ್ಷಕ ಸೈಯದ್ ಇಮ್ರಾನ್, ನಾಗೇಶ್, ಕನ್ನಡ ಸಾಹಿತ್ಯ ಪರಿಷತ್ತಿನ ಪದಾಧಿಕಾರಿಗಳು, ಶಿಕ್ಷಕರು ಉಪಸ್ಥಿತರಿದ್ದರು.
ವರದಿ: ಗಿರೀಶ್ ಕೆ ಭಟ್


