ಬೆಳಗಾವಿ : ಬೆಳಗಾವಿಯಲ್ಲಿ ಕಬ್ಬು ಬೆಳೆಗಾರರ ಹೋರಾಟ ದಿನದಿಂದ ದಿನಕ್ಕೆ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದೆ. ಸಭೆಗಳ ಮೇಲೆ ಸಭೆಗಳು ನಡೆಯುತ್ತಿದ್ದರೂ ಕಬ್ಬಿನ ದರ ಮಾತ್ರ ಕಗ್ಗಂಟಾಗಿದೆ. ಕಬ್ಬಿಗೆ ಸೂಕ್ತ ಬೆಲೆ ನಿಗದಿ ಮಾಡುವಂತೆ ರೈತರು ನಡೆಸುತ್ತಿರುವ ನಿರಂತರ ಹೋರಾಟಕ್ಕೆ ಇನ್ನೂ ತಾರ್ಕಿಕ ಅಂತ್ಯ ಸಿಕ್ಕಿಲ್ಲ.
ಸಿಎಂ ಡಿಕೆ ಶಿವಕುಮಾರ್ ನೇತೃತ್ವದಲ್ಲಿ ನಡೆದ ಸಂಧಾನ ಸಭೆಯ ಬಳಿಕವೂ ಸಮಸ್ಯೆ ಬಗೆಹರಿಯದ ಹಿನ್ನೆಲೆ ಇಂದು ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ನೇತೃತ್ವದಲ್ಲಿ ಸರಣಿ ಸಭೆಗಳು ನಡೆದವು. ಆದರೆ ಕಾರ್ಖಾನೆ ಮಾಲೀಕರು ಮತ್ತು ರೈತರ ನಡುವಿನ ದರ ಗೊಂದಲ ಮಾತ್ರ ಬಗೆಹರಿದಿಲ್ಲ.
ಬೆಳಗಾವಿಯಲ್ಲಿನ ಕಬ್ಬು ಬೆಳೆಗಾರರ ಹೋರಾಟ ಇದೀಗ ನಿರ್ಣಾಯಕ ಘಟ್ಟ ತಲುಪಿದೆ. ಕಳೆದ ಎರಡು ತಿಂಗಳಿನಿಂದ ಕಬ್ಬಿಗೆ ಸೂಕ್ತ ಬೆಲೆ ನಿಗದಿಗಾಗಿ ರೈತರು ನಿರಂತರ ಹೋರಾಟ ನಡೆಸುತ್ತಿದ್ದಾರೆ.
ಪಾದಯಾತ್ರೆ, ರಸ್ತೆ ತಡೆ, ರಾಷ್ಟ್ರೀಯ ಹೆದ್ದಾರಿ ಬಂದ್, ಕರ್ನಾಟಕ ಬಂದ್ ಮಾಡಿ ಹೋರಾಟ ಮಾಡಿದರೂ ಸ್ಪಂದನೆ ಸಿಗದ ಕಾರಣಕ್ಕೆ ನಿನ್ನೆಯಿಂದ ರೈತರು ಜೈಲ್ ಭರೋ ಚಳವಳಿ ಆರಂಭಿಸಿದ್ದು, ಇದೀಗ ಹೋರಾಟದ ಕಾವು ಹೆಚ್ಚಾಗಿದೆ.
ಬೆಳಗಾವಿ ಡಿಸಿ ಕಚೇರಿಗೆ ಬೀಗ ಹಾಕಲು ಯತ್ನಿಸಿದ ರೈತರು
ಇನ್ನು ರೈತ ಮುಖಂಡ ಗಣೇಶ ಇಳಿಗೇರ್ ನೇತೃತ್ವದಲ್ಲಿ ಜಿಲ್ಲಾಧಿಕಾರಿ ಕಚೇರಿ ಎದುರು ಹೋರಾಟ ಮಾಡಿದ್ದು, ಈ ವೇಳೆ ಡಿಸಿ ಕಚೇರಿಯ ಮುಖ್ಯದ್ವಾರಕ್ಕೆ ಬೀಗ ಹಾಕಲು ರೈತರು ಯತ್ನಿಸಿದರು. ಈ ವೇಳೆ ಪೊಲೀಸರು ಹಾಗೂ ರೈತರ ನಡುವೆ ವಾಗ್ವಾದ ಉಂಟಾಗಿದ್ದು, ಬಳಿಕ ನೂಕಾಟ-ತಳ್ಳಾಟವಾಗಿ ಮಹಿಳೆಗೆ ಗಾಯವಾಗಿದೆ.
ಸಭೆ ನಡೆಸದೆ ಕಾಲಹರಣ ಮಾಡುತ್ತಿದ್ದಾರೆಂದು ಅಧಿಕಾರಿಗಳ ವಿರುದ್ದ ಆಕ್ರೋಶ ವ್ಯಕ್ತವಾಗಿದ್ದು, ಕೊಟ್ಟ ಮಾತಿನಂತೆ ಸಭೆ ನಡೆಸಿ, ದರ ನಿಗದಿ ಮಾಡುವಂತೆ ರೈತರ ಒತ್ತಾಯಿಸಿದ್ದಾರೆ. ಇದಕ್ಕೆ ಸ್ಪಂದಸಿದ್ದರೆ ಕೆಲವೇ ಕ್ಷಣಗಳಲ್ಲಿ ಚನ್ನಮ್ಮ ಸರ್ಕಲ್ ಬಂದ್ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ.


