ಬೆಂಗಳೂರು: ಪ್ರತಿ ತಿಂಗಳು ಗೃಹಲಕ್ಷ್ಮಿಯರ (Gruhalakshmi) ಖಾತೆಗೆ ಹಣ ಹಾಕುತ್ತೇವೆ ಎಂದು ಭರವಸೆ ನೀಡಿದ್ದ ಸರ್ಕಾರ (State Govt), ಎರಡು ತಿಂಗಳ ಹಣವನ್ನು ಪಾವತಿಸಿಲ್ಲವೇಕೆ? ಆ ಹಣ ಎಲ್ಲಿ ಹೋಯಿತು? ರಾಜ್ಯದ ಖಜಾನೆಯಲ್ಲಿ ಹಣವಿಲ್ಲವೇ? ಹೀಗೆ ಸಾಲು ಸಾಲು ಪ್ರಶ್ನೆಗಳನ್ನು ಮುಂದಿಟ್ಟು ಜೆಡಿಎಸ್ (JDS) ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ (Nikhil Kumaraswamy) ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಗೃಹಲಕ್ಷ್ಮಿ ಯೋಜನೆಯ 2024ರ ಫೆಬ್ರವರಿ ಮತ್ತು ಮಾರ್ಚ್ ತಿಂಗಳ ಹಣ ಫಲಾನುಭವಿಗಳಿಗೆ ತಲುಪಿಲ್ಲ. ಈ ಎರಡು ತಿಂಗಳ ಹಣದ ಮೊತ್ತವೇ ಸುಮಾರು 5 ಸಾವಿರ ಕೋಟಿ ರೂಪಾಯಿ ಆಗಿದ್ದು, ಸರ್ಕಾರ ಈ ಬಗ್ಗೆ ಜನರಿಗೆ ಉತ್ತರ ನೀಡಬೇಕು ಎಂದು ಅವರು ಆಗ್ರಹಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ನಿಖಿಲ್ ಕುಮಾರಸ್ವಾಮಿ, ಪರಿಷತ್ ಸದಸ್ಯ ಎ.ಪಿ. ರಂಗನಾಥ್ ಉಪಸ್ಥಿತರಿದ್ದರು.
ನಾಡಿನ ಮಹಿಳೆಯರನ್ನು ಗೃಹಲಕ್ಷ್ಮಿಯರು ಎಂದು ಕರೆಯುವ ಸರ್ಕಾರ, ಗ್ಯಾರಂಟಿ ಯೋಜನೆಯಡಿ ಪ್ರತಿ ತಿಂಗಳು ಡಿಬಿಟಿ ಮೂಲಕ ಹಣ ವರ್ಗಾವಣೆ ಮಾಡುವುದಾಗಿ ಘೋಷಿಸಿತ್ತು. ಆದರೆ ಯೋಜನೆ ಜಾರಿಯಾದ ಮೊದಲ ವರ್ಷದಲ್ಲೇ ಎಂಟು ತಿಂಗಳ ಹಣ ಮಾತ್ರ ಪಾವತಿಯಾಗಿದೆ.
2024ರ ಫೆಬ್ರವರಿ ಮತ್ತು ಮಾರ್ಚ್ ತಿಂಗಳ ಹಣ ಫಲಾನುಭವಿಗಳಿಗೆ ಏನಾಯಿತು ಎಂಬುದಕ್ಕೆ ಸರ್ಕಾರ ಸ್ಪಷ್ಟ ಉತ್ತರ ನೀಡುತ್ತಿಲ್ಲ ಎಂದು ನಿಖಿಲ್ ಪ್ರಶ್ನಿಸಿದರು.
ಈ ವಿಚಾರ ಈಗ ನ್ಯಾಯಾಲಯದ ಮೆಟ್ಟಿಲೇರಿದೆ. ಕೆಲವು ಮಹಿಳೆಯರು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದು, ಪ್ರಕರಣ ವಿಚಾರಣೆಯಲ್ಲಿದೆ. ಎರಡು ತಿಂಗಳ ಹಣ ಪಾವತಿಸಿರುವ ಕುರಿತು ಅಫಿಡವಿಟ್ ಸಲ್ಲಿಸುವಂತೆ ನ್ಯಾಯಾಲಯ ಕೇಳಿದೆ. ಆದರೆ ಸರ್ಕಾರ ಅಫಿಡವಿಟ್‌ಗೆ ಆಕ್ಷೇಪಣೆ ಸಲ್ಲಿಸಿದೆ ಎಂದು ನಿಖಿಲ್ ತಿಳಿಸಿದರು


