ಹುಬ್ಬಳ್ಳಿ: "ತ್ರಿಶೂಲವನ್ನು ದೇವರ ಮನೆಯಲ್ಲಿ ಇಟ್ಟು ಪೂಜೆ ಮಾಡಲು ನೀಡುತ್ತಿಲ್ಲ. ಅದನ್ನು ನಿಮ್ಮ ವ್ಯಾನಿಟಿ ಬ್ಯಾಗ್‌ನಲ್ಲಿ ಇಟ್ಟುಕೊಂಡು ಓಡಾಡಿ. ನಿಮ್ಮ ಮೇಲೆ ಯಾರಾದರೂ ಆಕ್ರಮಣ ಮಾಡಲು ಬಂದರೆ, ಅದರಿಂದ ಅವರ ಹೊಟ್ಟೆಗೆ ಚುಚ್ಚಿ ಆತ್ಮರಕ್ಷಣೆ ಮಾಡಿಕೊಳ್ಳಿ" ಎಂದು ಶ್ರೀರಾಮ ಸೇನೆಯ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಕರೆ ನೀಡಿದ್ದಾರೆ.
ಹುಬ್ಬಳ್ಳಿಯಲ್ಲಿ ಆಯೋಜನೆಗೊಂಡಿದ್ದ ತ್ರಿಶೂಲ ದೀಕ್ಷಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಮಹಿಳೆಯರು ತಮ್ಮ ರಕ್ಷಣೆಗೆ ಶಸ್ತ್ರ ಹೊಂದುವುದು ಅನಿವಾರ್ಯವಾಗಿದೆ ಎಂದು ಪ್ರತಿಪಾದಿಸಿದರು.
ಇದೇ ವೇಳೆ ಕಾನೂನು ಸುವ್ಯವಸ್ಥೆ ಮತ್ತು ಸರ್ಕಾರದ ನಡೆಗಳ ವಿರುದ್ಧ ಆಕ್ರೋಶ ಹೊರಹಾಕಿದ ಅವರು, "ಶ್ರೀರಾಮನ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿರುವ ಭಗವಾನ್ ಎಂಬುವವರ ವಿರುದ್ಧ ಸರ್ಕಾರ ಯಾವುದೇ ಕೇಸ್ ದಾಖಲಿಸಿಲ್ಲ. ಆದರೆ ನಾವು 'ಭಾರತ್ ಮಾತಾ ಕಿ ಜೈ' ಎಂದರೆ ನಮಗೆ ನೋಟಿಸ್ ನೀಡಲಾಗುತ್ತದೆ.
ನಾವು ಕೇವಲ ತ್ರಿಶೂಲ ದೀಕ್ಷೆ ನೀಡುವುದಕ್ಕೆ ಸೀಮಿತವಾಗುವುದಿಲ್ಲ, ಮುಂದಿನ ದಿನಗಳಲ್ಲಿ ತಲ್ವಾರ್ (ಖಡ್ಗ) ಗಳನ್ನೂ ವಿತರಿಸುತ್ತೇವೆ.
ತಲ್ವಾರ್ ನೀಡುವುದನ್ನು ತಡೆಯುವ ಧೈರ್ಯ ಯಾರಿಗಾದರೂ ಇದ್ದರೆ ಬಂದು ತಡೆಯಲಿ" ಎಂದು ಬಹಿರಂಗ ಸವಾಲು ಹಾಕಿದರು.


