ತುರುವೇಕೆರೆ: ಸಾಹಿತ್ಯ ಕ್ಷೇತ್ರದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಮಾಯಸಂದ್ರ ಹೋಬಳಿ ಘಟಕ ರಾಜ್ಯ ಮಟ್ಟದಲ್ಲಿ ಗುರುತಿಸಿಕೊಳ್ಳಲು ಕೆ.ಭೈರಪ್ಪ ಪ್ರಮುಖ ಕಾರಣರು ಎಂದು ಮಾಯಸಂದ್ರ ಕಸಾಪ ಹೋಬಳಿ ಘಟಕದ ಸಂಸ್ಥಾಪಕ ಅಧ್ಯಕ್ಷ ಎನ್.ಆರ್. ಜಯರಾಮ್ ತಿಳಿಸಿದರು.
ತಾಲ್ಲೂಕಿನ ಮಾಯಸಂದ್ರ ಕನ್ನಡ ಭವನದಲ್ಲಿ ಆಯೋಜಿಸಿದ್ದ ಸಾಹಿತಿ ಕೆ.ಭೈರಪ್ಪ ಅವರ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕೆ. ಭೈರಪ್ಪನವರು ಒಂದು ಅದ್ಭುತ ಸಾಹಿತ್ಯ ವಿಶ್ವವಿದ್ಯಾಇದ್ದಂತೆ. ಅವರು ಬರೆದ ಪುಸ್ತಕಗಳು ಕಾಲೇಜು ವಿದ್ಯಾರ್ಥಿಗಳಿಗೆ ಪಠ್ಯಪುಸ್ತಕಗಳಾಗಿ ಭವಿಷ್ಯ ಬರೆದಿದೆ. ಕನ್ನಡ ಸಾಹಿತ್ಯ ಲೋಕಕ್ಕೆ ಕೆ.ಭೈರಪ್ಪನವರ ಕೊಡುಗೆ ಬಹಳಷ್ಟಿದೆ. ಅವರನ್ನು ಕಳೆದುಕೊಂಡು ಸಾಹಿತ್ಯ ಕ್ಷೇತ್ರ, ಕಸಾಪದಲ್ಲಿ ಅನಾಥ ಪ್ರಜ್ಞೆ ಕಾಡುತ್ತಿದೆ ಎಂದು ವಿಷಾಧಿಸಿದರು.
ಕಸಾಪ ಅಧ್ಯಕ್ಷ ಮುನಿರಾಜು ಮಾತನಾಡಿ, ಕೆ.ಭೈರಪ್ಪ ಅವರು ಕೇವಲ ಸಾಹಿತಿ ಮಾತ್ರವಲ್ಲ, ಉತ್ತಮ ಮಾನವೀಯ ಮೌಲ್ಯಗಳನ್ನು ಹೊಂದಿದ್ದ ವ್ಯಕ್ತಿಯಾಗಿದ್ದರು. ಸಮಾಜಮುಖಿ ಚಿಂತನೆ ಎಷ್ಟಿತ್ತು ಎಂಬುದನ್ನು ಅವರ ಬರವಣಿಗೆಯಲ್ಲಿ ಕಾಣಬಹುದಾಗಿದೆ. ಕೆ.ಭೈರಪ್ಪನವರ ಅಗಲಿಕೆ ಅಕ್ಷರ ಕ್ಷೇತ್ರಕ್ಕೆ ತುಂಬಲಾರದ ನಷ್ಟ ಎಂದರು.
ಈ ಸಂದರ್ಭದಲ್ಲಿ ಕೆ.ಭೈರಪ್ಪನವರ ಪುತ್ರ ನಂದೀಶ್, ಕಸಾಪ ಸದಸ್ಯರಾದ ಪಿ.ಎನ್.ಜವರೇಗೌಡರು, ಸಿ.ಎನ್.ನಂಜುಂಡಪ್ಪ, ರೈತ ಸಂಘದ ಅಧ್ಯಕ್ಷ ಚಂದ್ರಶೇಖರ್, ಸಿ.ಪಿ. ಪ್ರಕಾಶ್, ಹನುಮಂತಯ್ಯ, ಪುಟ್ಟೇಗೌಡರು, ಶಿವರಾಮ್, ಎಂ.ಆರ್.ಬಸವರಾಜು, ಲೀಲಾವತಿಗಿಡ್ಡಯ್ಯ, ಭೈರಪ್ಪ, ಮಹೇಶ್, ಕಿರಣ್ ಸೇರಿದಂತೆ ಹಲವರು ಅಗಲಿದ ಹಿರಿಯ ಚೇತನ ಕೆ.ಭೈರಪ್ಪ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸುವ ಮೂಲಕ ಶ್ರದ್ಧಾಂಜಲಿ ಅರ್ಪಿಸಿದರು
ವರದಿ: ಗಿರೀಶ್ ಕೆ ಭಟ್

