ತುರುವೇಕೆರೆ: ವಿವಿಧ ಬೇಡಿಕೆಗಳ ಈಡೇರಿಕೆಗೆ ಸರ್ಕಾರವನ್ನು ಒತ್ತಾಯಿಸಿ ಇಂದು ತುರುವೇಕೆರೆಯ ಔಷಧಿ ಅಂಗಡಿ ವ್ಯಾಪಾರಿಗಳು ತಮ್ಮ ಅಂಗಡಿ ಬಂದ್ ಮಾಡಿ ಮುಷ್ಕರ ನಡೆಸಿದರು.
ಅಖಿಲ ಭಾರತ ಔಷಧ ವ್ಯಾಪಾರಿಗಳ ಸಂಘದ ತುರುವೇಕೆರೆ ತಾಲ್ಲೂಕು ಅಧ್ಯಕ್ಷ ಎಂ.ನರಸಿಂಹಮೂರ್ತಿ ಮಾತನಾಡಿ, ಸರ್ಕಾರ ಆನ್ಲೈನ್ ಮೂಲಕ ಔಷಧಿ ಖರೀದಿಗೆ ಅವಕಾಶ ಕಲ್ಪಿಸಿರುವುದು ಸರಿಯಲ್ಲ. ಆನ್ಲೈನ್ ನಲ್ಲಿ ಹುಡುಕಿದರೆ ಪ್ರತಿ ಕಾಯಿಲೆಗೆ ಹತ್ತಾರು ಕಂಪನಿಗಳ ಹತ್ತಾರು ತರಹದ ಔಷಧ ದೊರೆಯಬಹುದು, ಆದರೆ ಎಲ್ಲರಿಗೂ ಯಾವ ಔಷಧ, ಎಷ್ಟು ಪ್ರಮಾಣದ್ದು ತೆಗೆದುಕೊಳ್ಳಬೇಕೆನ್ನುವ ಅರಿವು ಇರುವುದಿಲ್ಲ. ಇದರಿಂದ ವ್ಯಕ್ತಿಯ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ವೈದ್ಯರ ಸಲಹೆ ಮೇರೆಗೆ ಔಷಧ, ಮಾತ್ರೆ ಸೇವಿಸುವುದರಿಂದ ಆರೋಗ್ಯ ಕಾಪಾಡಿಕೊಳ್ಳಲು ಸುಲಭವಾಗುತ್ತದೆ. ನಾಗರೀಕರ ಆರೋಗ್ಯ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಸರ್ಕಾರ ಔಷಧಗಳ ಆನ್‍ಲೈನ್ ಮಾರಾಟ ನಿಲ್ಲಿಸಬೇಕೆಂದು ಒತ್ತಾಯಿಸಿದರು.
ಇದಲ್ಲದೆ ಕಾರ್ಪೋರೆಟ್ ವಿನಾಯಿತಿ ನಿಲ್ಲಿಸುವುದು. ನಕಲಿ ಔಷಧ ದೂರವಿಡುವುದು, ಆಕ್ರಮಣಕಾರಿ ಬೆಲೆ ನಿಗದಿ, ತುರ್ತು ಅಧಿಸೂಚನೆಗಳನ್ನು ಹಿಂತೆಗೆದುಕೊಳ್ಳಬೇಕು. ಕೋವಿಡ್ ಸಮಯದಲ್ಲಿ ಮಾಡಲಾದ ಅಧಿಸೂಚನೆಯನ್ನು ಮುಂದುವರಿಸಿದ್ದು, ಅದನ್ನು ತಕ್ಷಣವೇ ರದ್ದುಗೊಳಿಸಬೇಕು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ ಅವರು, ಸರ್ಕಾರ ಸೂಕ್ತ ಕ್ರಮಕೈಗೊಳ್ಳದಿದ್ದರೆ ಮುಂದಿನ ದಿನಗಳಲ್ಲಿ ದೊಡ್ಡ ಮಟ್ಟದಲ್ಲಿ ಹೋರಾಟ ಕೈಗೊಳ್ಳಲಾಗುವುದು ಎಂದರು.
ತುರುವೇಕೆರೆ ತಾಲ್ಲೂಕು ಔಷಧ ವ್ಯಾಪಾರಿಗಳ ಸಂಘದ ಪದಾಧಿಕಾರಿಗಳು, ಔಷಧ ವ್ಯಾಪಾರಸ್ಥರು ಅಂಗಡಿ ಬಂದ್ ಮಾಡಿ ತಾಲೂಕು ಕಛೇರಿಗೆ ತೆರಳಿ ಗ್ರೇಡ್ 2 ತಹಸೀಲ್ದಾರ್ ಸುನಿಲ್ ಕುಮಾರ್ ಅವರಿಗೆ ಮನವಿ ಪತ್ರ ಸಲ್ಲಿಸಿದರು.
ಈ ಸಂದರ್ಭದಲ್ಲಿ ಔಷಧ ವ್ಯಾಪಾರಿಗಳಾದ ಅಜಯ್ ಸಿಂಹ, ಪ್ರದೀಪ್ ಗುಪ್ತ, ವೀರೋರಾಮ್, ಭಾಸ್ಕರ್, ರವಿ, ಬಾಬು, ಮಂಜುನಾಥ್, ನರೇಂದ್ರ, ಪ್ರವೀಣ್, ಭರತ್, ಸಿದ್ದು, ಅಭಿ, ಕುಮಾರ್, ದೇವರಾಜ್ ಮುಂತಾದವರಿದ್ದರು.
ವರದಿ: ಗಿರೀಶ್ ಕೆ ಭಟ್

