ಚೇಳೂರು : ತಾಲ್ಲೂಕಿನ ರಾಶ್ಚೇರುವು ಗ್ರಾಮದಲ್ಲಿ ಕಂದಾಯ ಇಲಾಖೆ, ತಾಲ್ಲೂಕು ಪಂಚಾಯಿತಿ ಆಶ್ರಯದಲ್ಲಿ ಬುಧವಾರ ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ಅಧ್ಯಕ್ಷತೆಯಲ್ಲಿ ಸಾರ್ವಜನಿಕರ ಅಹವಾಲು ಸ್ವೀಕಾರ ಮತ್ತು ಜನಸ್ಪಂದನ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದ ಉದ್ಘಾಟನೆಯನ್ನು ನೆರವೇರಿಸಿ ಈ ಬಳಿಕ ಶಾಸಕರು ಮಾತನಾಡಿ, ಸರ್ಕಾರದ ಯೋಜನೆಗಳು ಮತ್ತು ಸೌಲಭ್ಯಗಳನ್ನು ಅರ್ಹ ಫಲಾನುಭವಿಗಳಿಗೆ ತಲುಪಿಸುವ ಉದ್ದೇಶದಿಂದ ಈ ಸಭೆಗಳನ್ನು ನಡೆಸಲಾಗುತ್ತಿದೆ, ಸಾರ್ವಜನಿಕರು ಸ್ಥಳದಲ್ಲೇ ತಮ್ಮ ಸಮಸ್ಯೆಗಳನ್ನು ತಿಳಿಸಿ ಅರ್ಜಿಗಳನ್ನು ಸಲ್ಲಿಸಬಹುದು.
‘ಸರ್ಕಾರದ ಕಂದಾಯ, ಪಂಚಾಯಿತಿ ಸೇರಿದಂತೆ ಇಲಾಖೆಗಳ ಯೋಜನೆಗಳನ್ನು ನೇರವಾಗಿ ಅರ್ಹ ಫಲಾನುಭವಿಗಳಿಗೆ ತಲುಪಿಸಲು ನನ್ನ ಕ್ಷೇತ್ರದ ಮೂರು ತಾಲ್ಲೂಕುಗಳಾದ ಚೇಳೂರು, ಬಾಗೇಪಲ್ಲಿ ಗುಡಿಬಂಡೆ ತಾಲ್ಲೂಕುಗಳಲ್ಲಿ ಜನಸ್ಪಂದನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ’ ಎಂದರು.
‘ಪಂಚಾಯಿತಿ ಮತ್ತು ಕಂದಾಯ ಇಲಾಖೆಗಳ ಅಧಿಕಾರಿಗಳು, ಸಿಬ್ಬಂದಿ ಮನೆಗೆ ಭೇಟಿ ಮಾಡಿ, ಜನರಿಗೆ ಸರ್ಕಾರದ ಯೋಜನೆ ತಲುಪಿಸಲು ಅಗತ್ಯ ದಾಖಲೆ ಪಡೆದು, ಜನಸ್ಪಂದನ ಕಾರ್ಯಕ್ರಮದಲ್ಲಿ ವಿತರಿಸಲಾಗುತ್ತಿದೆ. ಪೋಡಿ, ದುರಸ್ಥಿಯಂತಹ ಕೆಲಸಗಳಿಗೆ ಅಗತ್ಯ ದಾಖಲೆ ನೀಡಿದರೆ 20 ದಿನಗಳ ಒಳಗೆ ಸಿಬ್ಬಂದಿ ಮನೆ ಬಾಗಿಲಿಗೆ ತಲುಪಿಸುತ್ತಾರೆ’ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ರೈತ ಸಂಪರ್ಕ ಕೇಂದ್ರಗಳ ಮೂಲಕ ರೈತರಿಗೆ ಕಡಲೆಕಾಯಿ ಬಿತ್ತನೆ ಬೀಜ ವಿತರಣೆ ಮಾಡಿದರು, ಭಾಗ್ಯಲಕ್ಷ್ಮೀ ಫಲಾನುಭವಿಗಳಿಗೆ ಭಾಗ್ಯಲಕ್ಷ್ಮಿ ಬಾಂಡ್ ಗಳು, ವಿವಿಧ ಸ್ತ್ರೀಶಕ್ತಿ ಸಂಘಗಳು ಮತ್ತು ಮಹಿಳಾ ಸ್ವ-ಸಹಾಯ ಗುಂಪುಗಳಿಗೆ ಚೇಕ್ ವಿತರಣೆ, ಕಂದಾಯ ಇಲಾಖೆಯಿಂದ ಕಂದಾಯ ಗ್ರಾಮ ಪಿಂಚಣಿ, ಪೌತಿಖಾತೆ,ಪೋಡಿ,ತಿಳಿವಳಿಕೆ ಪತ್ರ, ಇ- ಖಾತೆ,ಹಕ್ಕುಪತ್ರಗಳು ಸೇರಿದಂತೆ ಸರ್ಕಾರದ ಯೋಜನೆಗಳ ವಿವಿಧ ಪತ್ರಗಳು ವಿತರಿಸಲಾಯಿತು.
ಪೌಷ್ಟಿಕ ಆಹಾರ ಪ್ರದರ್ಶನ: ತಾಲ್ಲೂಕು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದ ಹತ್ತಾರು ಜನ ಮಹಿಳೆಯರಿಗೆ ಸೀಮಂತ ಕಾರ್ಯವನ್ನು ನಿರ್ವಹಿಸಿದರು. ಅಂಗನವಾಡಿ ನೌಕರರು, ಸಿಬ್ಬಂದಿ ಮನೆಗಳಲ್ಲಿ ವಿವಿಧ ಬಗೆಯ ಚಕ್ಕುಲಿ, ರೊಟ್ಟಿ, ರವೆಉಂಡೆ, ಕಾಳು, ಸೊಪ್ಪುಗಳ ಪಲ್ಯಗಳನ್ನು ಸಿದ್ಧಪಡಿಸಿ ತಂದಿದ್ದರು. ಮೊಟ್ಟೆ, ಸೊಪ್ಪು, ತರಕಾರಿ, ಕಾಳು ಸೇರಿದಂತೆ ವಿವಿಧ ತಿಂಡಿತಿನಿಸುಗಳ ಪ್ರದರ್ಶನ ಮಾಡಿದರು.
ಕಾರ್ಯಕ್ರಮದಲ್ಲಿ ಸಾರ್ವಜನಿಕರಿಂದ ಹತ್ತಾರು ಅರ್ಜಿಗಳನ್ನು ಸ್ವೀಕರಿಸಿ ಕೆಲವೊಂದು ಸ್ಥಳದಲ್ಲೇ ಇತ್ಯರ್ಥ ಮಾಡಿದರು ಇನ್ನೂ ಸಂಬಂಧಿಸಿದ ಅರ್ಜಿಗಳು ಇಲಾಖವಾರಿಗೆ ಇತ್ಯರ್ಥಕ್ಕೆ ನೀಡಿದರು
ಕಾರ್ಯಕ್ರಮ ನಂತರ ಚೇಳೂರು ತಾಲ್ಲೂಕು ಗಡ್ಡಂಪಲ್ಲಿ ಗ್ರಾಮದಲ್ಲಿ ಶುದ್ಧ ಕುಡಿಯುವ ನೀರಿನ ಘಟಕವನ್ನು ಉದ್ಗಾಟನೆ ಮಾಡಿ ಗ್ರಾಮದ ಜನರಿಗೆ ಕುಡಿಯುವ ನೀರಿನ ಕ್ಯಾನ್ ಗಳನ್ನು ವಿತರಣೆ ಮಾಡಿ ನಂತರ ಕೊಂಡೂರಪಲ್ಲಿ ಗ್ರಾಮದಲ್ಲಿ ಅಳವಡಿಸಿರುವ ಶುದ್ಧ ಕುಡಿಯುವ ನೀರಿನ ಘಟಕ ಉದ್ಗಾಟನೆ ಮಾಡುದರು.
ಈ ಸಂದರ್ಭದಲ್ಲಿ ತಹಶಿಲ್ದಾರ್ ಶ್ವೇತ ಬಿ.ಕೆ,ಸರ್ಕಲ್ ಇನ್ಸ್ಪೆಕ್ಟರ್ ಎಂ.ಶ್ರೀನಿವಾಸ್,ತಾಲ್ಲೂಕು ಆರೋಗ್ಯ ಅಧಿಕಾರಿ ಸತ್ಯನಾರಾಯಣರೆಡ್ಡಿ,ಸಿಡಿಪಿಒ ರಾಮಚಂದ್ರ, ವಕೀಲ ಚಂದ್ರಶೇಖರ್,ಆರ್ಐ ಈಶ್ವರ್,ಸ್ಥಳೀಯ ಮುಖಂಡರು ಉಪಸ್ಥಿತರಿದ್ದರು.
ವರದಿ :ಯಾರಬ್. ಎಂ.


