ಚಡಚಣ: "ಬಿಜೆಪಿ ಸರ್ಕಾರವು ಎಸ್‌ಐಆರ್ (SIR) ನೆಪದಲ್ಲಿ ಅನೇಕ ಮತದಾರರ ಹೆಸರುಗಳನ್ನು ಕೈಬಿಡುವ ಮೂಲಕ ಉದ್ದೇಶಪೂರ್ವಕವಾಗಿ ಕುತಂತ್ರ ರಾಜಕಾರಣ ಮಾಡುತ್ತಿದೆ," ಎಂದು ನಾಗಠಾಣ ಮತಕ್ಷೇತ್ರದ ಶಾಸಕ ವಿಠ್ಠಲ ಕಟಕಧೋಂಡ ಆರೋಪಿಸಿದರು.
ಚಡಚಣ ಪಟ್ಟಣದ ಅಂಜುಮನ್ ಇಸ್ಲಾಂ ಕಮಿಟಿ ಶಾದಿ ಮಹಲ್‌ನಲ್ಲಿ ನಡೆದ ನಾಗಠಾಣ ಮತಕ್ಷೇತ್ರದ ಚಡಚಣ ಬ್ಲಾಕ್ ಕಾಂಗ್ರೆಸ್ ಬಿಎಲ್‌ಎಗಳ (BLA) ತರಬೇತಿ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
"ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರು ಸಂವಿಧಾನದ ಮೂಲಕ ದೇಶದ ಪ್ರತಿಯೊಬ್ಬ ಜನರಿಗೂ ಮತದಾನದ ಹಕ್ಕು ನೀಡಿದ್ದಾರೆ. ಪ್ರಸ್ತುತ ಎಲ್ಲಾ ರಾಜ್ಯಗಳಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯ ನಡೆಯುತ್ತಿದ್ದು, ಬಿಜೆಪಿ ಕಣ್ಣು ಕರ್ನಾಟಕದ ಮೇಲಿದೆ. ನಮ್ಮ ಕಾರ್ಯಕರ್ತರು ಇದರಲ್ಲಿ ಸಕ್ರಿಯವಾಗಿ ಭಾಗವಹಿಸಿ, ಅರ್ಹ ಮತದಾರರ ಹೆಸರುಗಳು ಪಟ್ಟಿಯಿಂದ ಕೈಬಿಟ್ಟು ಹೋಗದಂತೆ ಜಾಗೃತಿ ವಹಿಸಬೇಕು. ರಾಜಕೀಯ ಕುತಂತ್ರದಿಂದಾಗಿ ಮುಗ್ಧ ಮತದಾರರು ಹಕ್ಕು ವಂಚಿತರಾಗುವ ಸಾಧ್ಯತೆ ಇರುವುದರಿಂದ ನಾವೆಲ್ಲರೂ ಒಟ್ಟಾಗಿ ಜವಾಬ್ದಾರಿಯಿಂದ ಕೆಲಸ ಮಾಡಬೇಕಿದೆ," ಎಂದು ಶಾಸಕರು ಕರೆ ನೀಡಿದರು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಲೋಣಿ ಮಾತನಾಡಿ, "ವಿಶೇಷ ಮತದಾರರ ಪಟ್ಟಿ ಪರಿಷ್ಕರಣೆ ಕುರಿತು ಕಾಂಗ್ರೆಸ್ ಪಕ್ಷವು ಸಚಿವ ಎಂ. ಬಿ. ಪಾಟೀಲ ಅವರ ನೇತೃತ್ವದಲ್ಲಿ ಜಿಲ್ಲೆಯಲ್ಲಿ ಬೃಹತ್ ಸಮಾವೇಶ ನಡೆಸಿ ಜಾಗೃತಿ ಮೂಡಿಸಿದೆ. ಮತದಾರರ ಪಟ್ಟಿ ಪರಿಷ್ಕರಣೆ ನೆಪದಲ್ಲಿ ಬಿಜೆಪಿ ಸರ್ಕಾರ ತನ್ನ ಕುತಂತ್ರವನ್ನು ಮುಂದುವರಿಸಿದೆ. ಇಡೀ ದೇಶದಲ್ಲಿ ಕಾಂಗ್ರೆಸ್ ಪಕ್ಷವನ್ನು ಬಲಪಡಿಸಲು ಇಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಕಾಂಗ್ರೆಸ್ ಸರ್ಕಾರವು ಜನರಿಗೆ ಕೊಟ್ಟ ಮಾತಿನಂತೆ ನಡೆದುಕೊಂಡು ಜನಪ್ರಿಯತೆ ಗಳಿಸಿದೆ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜಾರಿಗೆ ತಂದ ಅನೇಕ ಜನಪರ ಯೋಜನೆಗಳು ಇಂದಿಗೂ ಜನಮಾನಸದಲ್ಲಿವೆ. ಎಸ್‌ಐಆರ್ ಪ್ರಕ್ರಿಯೆಯಲ್ಲಿ ಕೇವಲ ನಕಲಿ ಹೆಸರುಗಳನ್ನು ಮಾತ್ರ ಕೈಬಿಡಬೇಕೇ ಹೊರತು, ಯಾವುದೇ ರೀತಿಯ ಕುತಂತ್ರ ರಾಜಕಾರಣ ಮಾಡಬಾರದು," ಎಂದರು.
"ಬಿಜೆಪಿ ಸರ್ಕಾರವು ಅನೇಕ ರಾಜ್ಯಗಳಲ್ಲಿ ಎಸ್‌ಐಆರ್ ವ್ಯವಸ್ಥೆಯನ್ನು ದುರುಪಯೋಗಪಡಿಸಿಕೊಂಡಿದೆ. ಬಿಎಲ್‌ಒಗಳು (BLO) ಮನೆಗೆ ಬಂದಾಗ ಸಾರ್ವಜನಿಕರು ಸರಿಯಾದ ಮಾಹಿತಿ ಒದಗಿಸಿ, ಎಸ್‌ಐಆರ್ ಅರ್ಜಿ ಸಲ್ಲಿಸಲು ಸಹಕರಿಸಬೇಕು. ನಾಗಠಾಣ ಮತಕ್ಷೇತ್ರವು ಮೀಸಲು ಕ್ಷೇತ್ರವಾಗಿದ್ದು, ಪ್ರತಿಯೊಬ್ಬರೂ ಅತ್ಯಂತ ಕಾಳಜಿಯಿಂದ ಈ ಪ್ರಕ್ರಿಯೆಯಲ್ಲಿ ಭಾಗವಹಿಸಬೇಕು," ಎಂದು ತಿಳಿಸಿದರು.
ಪಕ್ಷದ ಮುಖಂಡರಾದ ಸುರೇಶಗೌಡ ಪಾಟೀಲ (ಜಿಲ್ಲಾ ಉಪಾಧ್ಯಕ್ಷ): "ಶಿಕ್ಷಣ ಇಲಾಖೆಯ ವತಿಯಿಂದ ನೇಮಕವಾಗಿರುವ ಸರ್ಕಾರಿ ಬಿಎಲ್‌ಒಗಳ ಜೊತೆಗೆ ನಮ್ಮ ಪಕ್ಷದ ಬಿಎಲ್‌ಎಗಳು ಸಂಪೂರ್ಣವಾಗಿ ಸಹಕರಿಸಿ ಕೆಲಸ ಮಾಡಬೇಕು."
ಡಿ. ಎಲ್. ಚವ್ಹಾಣ (ಜಿಲ್ಲಾ ಕಾಂಗ್ರೆಸ್ ಮುಖಂಡ): "ಎಲ್ಲಾ ಪಕ್ಷಗಳ ಬಿಎಲ್‌ಎಗಳು ಮತ್ತು ಕಾರ್ಯಕರ್ತರು ಸರ್ಕಾರದ ನಿಯೋಜಿತ ಅಧಿಕಾರಿಗಳೊಂದಿಗೆ ಕೈಜೋಡಿಸಿ ಪಾರದರ್ಶಕತೆಗೆ ಶ್ರಮಿಸಬೇಕು."
ಆರ್. ಡಿ. ಹಕ್ಕಿ (ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ): "ಸರ್ಕಾರದ ಪ್ರತಿನಿಧಿಗಳಾಗಿ ಬಿಎಲ್‌ಒಗಳು ಮಾಡುವ ಕೆಲಸದಲ್ಲಿ ಯಾವುದೇ ಲೋಪದೋಷಗಳಾಗದಂತೆ ನೋಡಿಕೊಳ್ಳುವ ಜವಾಬ್ದಾರಿಯನ್ನು ಪಕ್ಷದ ಕಾರ್ಯಕರ್ತರು ಹೊರಬೇಕು." ಸಲಹೆ ನೀಡಿದರು.
ಈ ಸಂದರ್ಭದಲ್ಲಿ ಪಪಂ ಉಪಾಧ್ಯಕ್ಷ ಇಲಾಯಿ ನದಾಫ್, ಮುಖಂಡರಾದ ಸುರೇಶ ಗೊಣಸಗಿ, ಸೋಮು ಕತ್ನಾಳಿ, ಸಂತೋಷ ಪಾಟೀಲ, ಸಾಹೇಬ್ ಗೌಡ ಬಿರಾದಾರ, ಕುತ್ಬುದ್ದಿನ್ ಪಟೇಲ್, ಮುರ್ತುಜಾ ನದಾಫ, ದೇವಪ್ಪ ಗೌಡ ಪಾಟೀಲ, ದಯಾನಂದ ಪಾಟೀಲ, ದಶರಥ ಬನಸೋಡೆ, ಮಹಾದೇವ ಬನಸೋಡೆ, ಕಾಮೇಶ ಪಾಟೀಲ, ಶಿವಾಜಿ ವಾಲಿಕಾರ, ರವಿ ಬಿರಾದಾರ, ದಾನಮ್ಮ ಪಾಟೀಲ ಸಿದ್ದಲಿಂಗ ಬಂಸೋಡೆ ನಾಗೇಶ್ ಗಾಯಕವಾಡ ಸೇರಿದಂತೆ ಬ್ಲಾಕ್ ಕಾಂಗ್ರೆಸ್‌ನ ಹಿರಿಯ ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.
ವರದಿ :ಉಮಾಶಂಕರ ಕ್ಷತ್ರಿ


