ವಿಜಯಪುರ: ಜಿಲ್ಲೆಯ ಬಬಲೇಶ್ವರ ತಾಲೂಕಿನ ಮಮದಾಪೂರ ಗ್ರಾಮದಲ್ಲಿ ತಡರಾತ್ರಿ ಪಾನ್ ಶಾಪ್ ಒಂದರಲ್ಲಿ ನಿಗೂಢ ಸ್ಫೋಟ ಸಂಭವಿಸಿದೆ.
ಈ ಭೀಕರ ಘಟನೆಯಲ್ಲಿ ಮೂವರು ತೀವ್ರವಾಗಿ ಗಾಯಗೊಂಡಿದ್ದು, ಗ್ರಾಮಸ್ಥರಲ್ಲಿ ತೀವ್ರ ಆತಂಕ ಹಾಗೂ ಸಾರ್ವಜನಿಕರಲ್ಲಿ ಕುತೂಹಲ ಮೂಡಿಸಿದೆ.
ಸ್ಫೋಟದ ತೀವ್ರತೆಗೆ ರವಿಕಿರಣ ಎಂಬುವವರಿಗೆ ಸೇರಿದ ಶೆಡ್ ಮಾದರಿಯ ಪಾನ್ ಶಾಪ್ ಸಂಪೂರ್ಣವಾಗಿ ಜಖಂಗೊಂಡಿದೆ.
ಅಂಗಡಿ ಮಾಲೀಕ ರವಿಕಿರಣ ಸೇರಿದಂತೆ ಅಲ್ಲೇ ಹತ್ತಿರದಲ್ಲಿದ್ದ ಮೂವರು ಗಾಯಗೊಂಡಿದ್ದಾರೆ. ಘಟನೆ ನಡೆದ ತಕ್ಷಣವೇ ಸ್ಥಳೀಯರು ಓಡಿ ಬಂದು ಗಾಯಾಳುಗಳನ್ನು ರಕ್ಷಿಸುವ ಕಾರ್ಯದಲ್ಲಿ ತೊಡಗಿಕೊಂಡರು.
ಸದ್ಯ ಗಾಯಾಳುಗಳನ್ನು ತಕ್ಷಣವೇ ವಿಜಯಪುರದ ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವರಿಗೆ ತುರ್ತು ಚಿಕಿತ್ಸೆ ನೀಡಲಾಗುತ್ತಿದೆ.
ಗಾಯಾಳುಗಳ ಸ್ಥಿತಿ ಸದ್ಯಕ್ಕೆ ಸ್ಥಿರವಾಗಿದೆ ಎಂದು ಆಸ್ಪತ್ರೆಯ ಮೂಲಗಳು ತಿಳಿಸಿವೆ. ಘಟನಾ ಸ್ಥಳಕ್ಕೆ ಬಬಲೇಶ್ವರ ಪೊಲೀಸ್ ಠಾಣೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ಧಾವಿಸಿ, ಪರಿಶೀಲನೆ ನಡೆಸಿದ್ದಾರೆ.

