ತುರುವೇಕೆರೆ : ತಾಲೂಕಿನ ಕಸಬಾ ಹೋಬಳಿ ಕೊಂಡಜ್ಜಿ ಕ್ರಾಸಿನಿಂದ ಮಂಗಿಕುಪ್ಪೆ ಮಾರ್ಗವಾಗಿ ಚಂಡೂರು ತಲುಪುವ ರಸ್ತೆ ಸಂಪೂರ್ಣವಾಗಿ ಹದಹೆಟ್ಟಿದ್ದು ರಸ್ತೆಯಲ್ಲಿ ಗುಂಡಿಗಳ ಸರಮಾಲೆಯೇ ತುಂಬಿದೆ. ಅಧಿಕಾರಿಗಳ ನಿರ್ಲಕ್ಷ್ಯದಿಂದ ಜನತೆ ಗುಂಡಿಯಲ್ಲಿ ಬಿದ್ದು ಎದ್ದು ಈ ರಸ್ತೆಯಲ್ಲಿ ಸಂಚರಿಸುವಂತಾಗಿದೆ.
ಕೊಂಡಜ್ಜಿ ಕ್ರಾಸಿನಿಂದ ಮಂಗಿಕುಪ್ಪೆ ಮಾರ್ಗವಾಗಿ ಚಂಡೂರಿಗೆ ಕನಿಷ್ಟ 2-3 ಕಿಲೋಮೀಟರ್ ದೂರವಿದ್ದು, ಪೂರ್ಣ ರಸ್ತೆ ಜಲ್ಲಿ ಮಣ್ಣಿನ ರಸ್ತೆಯಾಗಿದೆ. ಈ ರಸ್ತೆಯಲ್ಲಿ ಪ್ರತಿನಿತ್ಯ ವಿದ್ಯಾರ್ಥಿಗಳು, ಮಹಿಳೆಯರು, ರೈತರು, ವಾಹನ ಸವಾರರು ಸೇರಿದಂತೆ ಸಾಕಷ್ಟು ಮಂದಿ ಸಂಚರಿಸುತ್ತಾರೆ. ಆದರೆ ಈವರೆಗೆ ರಸ್ತೆ ಮಾತ್ರ ಸರಿಪಡಿಸಿಲ್ಲ. ಹಲವಾರು ಬಾರಿ ರಸ್ತೆ ಸರಿಪಡಿಸುವಂತೆ ಸ್ಥಳೀಯ ಜನಪ್ರತಿನಿಧಿಗಳಿಗೆ, ಅಧಿಕಾರಿಗಳಿಗೆ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ.
ಈಗ ಆಗಿಂದಾಗ್ಗೆ ಮಳೆ ಬೀಳುತ್ತಿದ್ದು ರಸ್ತೆಯಲ್ಲಿರುವ ನೂರಾರು ಗುಂಡಿಗಳು ಮಳೆ ನೀರಿನಿಂದ ತುಂಬಿ ರಸ್ತೆಯೆಲ್ಲಿದೆ, ಗುಂಡಿಯೆಲ್ಲಿದೆ ಎಂದು ನೋಡಿಕೊಂಡು ಸಂಚರಿಸುವಂತಹ ದುಸ್ಥಿತಿ ಈ ಭಾಗದ ನಾಗರೀಕರಿಗೆ ಬಂದೊದಗಿದೆ. ವಾಹನ ಸವಾರರು ವೇಗವಾಗಿ ಬಂದು ನೀರಿದ್ದ ಗುಂಡಿಯಲ್ಲಿ ವಾಹನದ ಚಕ್ರ ಇಳಿಸಿದರೆ ಪಕ್ಕದಲ್ಲಿ ನಡೆದುಕೊಂಡು ಬರುವ ಪಾದಚಾರಿಗಳಿಗೆ ಕೊಚ್ಚೆಸ್ನಾನ ಕಟ್ಟಿಟ್ಟ ಬುತ್ತಿಯಾಗಿದೆ. ಶಾಲೆಗೆ ಹೋಗುವ ವಿದ್ಯಾರ್ಥಿಗಳಿಗೆ ಈ ಕೆಸರಿನ ನೀರು ಬಿದ್ದು ಶಾಲಾ ಸಮವಸ್ತ್ರ ಹಾಳಾಗಿ ಶಾಲೆಗೆ ಕೊಳಕಾದ ಬಟ್ಟೆಯಲ್ಲೇ ಅನಿವಾರ್ಯವಾಗಿ ತೆರಳುವ ಪರಿಸ್ಥಿತಿ ನಿರ್ಮಾಣವಾಗಿದೆ.
ಈ ರಸ್ತೆಯ ಅಭಿವೃದ್ಧಿಗೆಂದು ಕೆಲವು ಲಕ್ಷಗಳ ಅನುದಾನ ಒದಗಿಸಲಾಗಿತ್ತೆಂದು ಸಂಬಂದಿಸಿದ ಗುತ್ತಿಗೆದಾರ ಸಮರ್ಪಕವಾಗಿ ಕೆಲಸ ನಿರ್ವಹಿಸದ್ದರಿಂದ ರಸ್ತೆ ಹಾಳಾಗಿ ಗುಂಡಿಗಳಿಂದ ತುಂಬಿ ಹೋಗಿದ್ದು ರಸ್ತೆಯಲ್ಲಿ ಸಂಚರಿಸುವುದು ಯಮಯಾತನೆಯಾಗಿದೆ ಎಂದು ಗ್ರಾಮಸ್ಥರು ನೋವಿನಿಂದ ನುಡಿಯುತ್ತಾರೆ.
ಈ ಬಗ್ಗೆ ಮಾಧ್ಯಮದೊಂದಿಗೆ ಮಾತನಾಡಿದ ಚಂಡೂರು ಗ್ರಾಮದ ಸಿ.ಹೆಚ್. ಗಿಡ್ಡೇಗೌಡರು, ರಸ್ತೆ ಹದಗೆಟ್ಟು ಬಹಳ ವರ್ಷಗಳಾಗಿದೆ. ರಸ್ತೆಯನ್ನು ಅಭಿವೃದ್ಧಿಪಡಿಸಿ ಸುಗಮಸಂಚಾರಕ್ಕೆ ಅನುವು ಮಾಡಿಕೊಡುವಂತೆ ಸ್ಥಳೀಯ ಅಧಿಕಾರಿಗಳಿಗೆ ಮನವಿ ಮಾಡಿದ್ದರೂ ಯಾವುದೇ ಕ್ರಮವಹಿಸದೆ ನಿರ್ಲಕ್ಷ್ಯ ವಹಿಸಿದ್ದಾರೆ.
2025-26 ನೇ ಸಾಲಿನಲ್ಲಿ ಈ ರಸ್ತೆ ನಿರ್ಮಾಣಕ್ಕೆ ಅನುದಾನ ಬಿಡುಗಡೆಯಾಗಿತ್ತು. ಈ ಬಗ್ಗೆ ಸಂಬಂಧಿಸಿದ ಲೋಕೋಪಯೋಗಿ ಇಲಾಖೆಯ ಎಇಇ ಅವರಿಗೆ ಮಾಹಿತಿ ಹಕ್ಕು ಕಾಯ್ದೆಯಡಿ 2026 ಜುಲೈ 08 ರಂದು ಮಾಹಿತಿ ಒದಗಿಸುವಂತೆ ಅರ್ಜಿ ಸಲ್ಲಿಸಿದ್ದೆ. ಆದರೆ ಒಂದು ತಿಂಗಳಾದರೂ ಇಲಾಖೆಯಿಂದ ಯಾವುದೇ ಮಾಹಿತಿ ನೀಡಿಲ್ಲ.
ರಸ್ತೆಯಲ್ಲಿ ಜನ ಜೀವಭಯದಿಂದ ಸಂಚರಿಸುತ್ತಿದ್ದಾರೆ. ಗುಂಡಿಗಳೇ ತುಂಬಿದ ರಸ್ತೆಯಲ್ಲಿ ಹಲವಾರು ಅಪಘಾತಗಳಾಗಿದೆ. ಆದರೂ ಅಧಿಕಾರಿಗಳು, ಜನಪ್ರತಿನಿಧಿಗಳು ಯಾರೊಬ್ಬರೂ ಈ ಬಗ್ಗೆ ತಲೆಕೆಡಿಸಿಕೊಂಡಿಲ್ಲ. ಕೂಡಲೇ ರಸ್ತೆ ಸರಿಪಡಿಸದಿದ್ದರೆ ಗ್ರಾಮಸ್ಥರೊಡಗೂಡಿ ರಸ್ತೆಯಲ್ಲಿ ಪ್ರತಿಭಟನೆ ಮಾಡುತ್ತೇವೆ. ಇಲಾಖೆ ನಿರ್ಲಕ್ಷ್ಯ ದ ಬಗ್ಗೆ ಜಿಲ್ಲಾಧಿಕಾರಿಗಳಿಗೆ, ಸಂಬಂಧಿಸಿದ ಸಚಿವರಿಗೆ ದೂರು ಸಲ್ಲಿಸಲಾಗುವುದು ಎಂದರು.
ವರದಿ : ಗಿರೀಶ್ ಕೆ ಭಟ್


