ಬೆಂಗಳೂರು : ಹಲವು ದಿನಗಳ ಕಸರತ್ತಿನ ಬಳಿಕ ಡಿಕೆ ಶಿವಕುಮಾರ್ ನೇತೃತ್ವದ ಮಂತ್ರಿ ಮಂಡಲ ಸಂಪೂರ್ಣವಾಗಿ ಸಿದ್ಧವಾಗಿದ್ದು, ಮೊನ್ನೆ 19 ನೂತನ ಸಚಿವರು ಲೋಕಭವನದಲ್ಲಿ ಪ್ರಮಾಣವಚನ ಸ್ವೀಕರಿಸಿದರು.
ಈ ಮೂಲಕ ಕಾಂಗ್ರೆಸ್ ಸಚಿವ ಸಂಪುಟ ವಿಸ್ತರಣೆಗೆ ಪೂರ್ಣವಿರಾಮ ಬಿದ್ದಿದ್ದು, ಒಟ್ಟು 34 ಸಚಿವರು ನಾಡ ಜನರ ಸೇವೆಗೆ ಸಿದ್ಧರಾಗಿದ್ದಾರೆ.
ಬಿಟಿವಿ ಸೇರಿ ಹಲವು ವರದಿಗಳ ಪ್ರಕಾರ ಈ ಸಚಿವ ಸಂಪುಟದಲ್ಲಿ ದಲಿತರು 10, ಲಿಂಗಾಯತರು 7, ಹಿಂದುಳಿದ ವರ್ಗಗಳು 7, ಒಕ್ಕಲಿಗರು 6, ಅಲ್ಪಸಂಖ್ಯಾತರು 4 ಮಂದಿ ಸಚಿವ ಸ್ಥಾನ ಪಡೆದುಕೊಂಡಿದ್ದಾರೆ ಎಂದು ಪೋಸ್ಟ್ ಹಂಚಿಕೊಳ್ಳಲಾಗಿದೆ.
ಈ ಪೋಸ್ಟ್‌ಗಳು ವೈರಲ್ ಆಗಿದ್ದು, ಎಲ್ಲೆಡೆ ಬ್ರಾಹ್ಮಣ ಸಮುದಾಯದವರಿಗೆ ಒಂದೇ ಒಂದು ಸಚಿವ ಸ್ಥಾನ ಸಹ ಸಿಕ್ಕಿಲ್ಲ ಎಂದು ಟೀಕೆಗಳು ವ್ಯಕ್ತವಾಗುತ್ತಿವೆ.
1996ರಿಂದ 30 ವರ್ಷಗಳ ಕಾಲ ಸತತವಾಗಿ ರಾಜ್ಯದ ಎಲ್ಲ ಸಚಿವ ಸಂಪುಟದಲ್ಲೂ ಬ್ರಾಹ್ಮಣ ಸಮುದಾಯದವರಿಗೆ ಸ್ಥಾನ ನೀಡಲಾಗಿತ್ತು. ಹಲಿಯಾಳ ಕ್ಷೇತ್ರದಿಂದ 9 ಬಾರಿ ಎಂಎಲ್‌ಎ ಆಗಿದ್ದ ಆರ್‌ವಿ ದೇಶಪಾಂಡೆ ಎಚ್‌ಡಿ ದೇವೇಗೌಡ, ಜೆಎಚ್ ಪಾಟೀಲ್ ಹಾಗೂ ಎಸ್‌ಎಂ ಕೃಷ್ಣ ಸಚಿವ ಸಂಪುಟಗಳಲ್ಲಿ 1994ರಿಂದ 2004ರವರೆಗೆ ಸತತ ಹತ್ತು ವರ್ಷಗಳ ಕಾಲ ಕೈಗಾರಿಕಾ ಸಚಿವರಾಗಿ ಸೇವೆ ಸಲ್ಲಿಸಿದ್ದರು.
2015ರಿಂದ 2018ರವರೆಗೆ ಸಿದ್ದರಾಮಯ್ಯ ಸರ್ಕಾರದಲ್ಲೂ ಸಹ ಮಂತ್ರಿಯಾಗಿದ್ದರು. ಆದರೆ ಪ್ರಸ್ತುತ ಕಾಂಗ್ರೆಸ್ ಅಧಿಕಾರದ ಅವಧಿಯಲ್ಲಿ ಸಿದ್ದರಾಮಯ್ಯ ಮುಖ್ಯಮಂತ್ರಿಯಾದಾಗಲೂ ಹಾಗೂ ಡಿಕೆ ಶಿವಕುಮಾರ್ ಸಿಎಂ ಆದಾಗಲೂ ಇವರಿಗೆ ಮಂತ್ರಿ ಸ್ಥಾನ ಸಿಗಲಿಲ್ಲ.


