ಚೇಳೂರು : ಕಕ್ಷಿದಾರರಿಗೆ ಶೀಘ್ರ ಹಾಗೂ ನೈಜ ನ್ಯಾಯ ದೊರೆಯುವಂತೆ ನ್ಯಾಯಾಧೀಶರು, ವಕೀಲರು ಜವಾಬ್ದಾರಿಯಿಂದ ಕಾರ್ಯನಿರ್ವಹಿಸಬೇಕು. ಚೇಳೂರಿನಲ್ಲಿ ನ್ಯಾಯಾಲಯ ಸ್ಥಾಪನೆಯಾಗಿರುವುದು ಮನೆ ಬಾಗಿಲಿಗೆ ನ್ಯಾಯ ಪರಿಕಲ್ಪನೆ ಸಾಕಾರಗೊಳಿಸಿದೆ ಎಂದು ಹೈಕೋರ್ಟ್ ನ್ಯಾಯಮೂರ್ತಿ ಹಂಚಾಟಿ ಸಂಜೀವ್‌ಕುಮಾರ್ ಹೇಳಿದರು.
ಪಟ್ಟಣದ ಮಾನಸ ಎಜುಕೇಷನಲ್ ಟ್ರಸ್ಟ್ ಆವರಣದಲ್ಲಿ ಭಾನುವಾರ ನಡೆದ ಸಮಾರಂಭದಲ್ಲಿ ನೂತನ ಸಿವಿಲ್ ನ್ಯಾಯಾಧೀಶರ ಹಾಗೂ ಜೆಎಂಎಫ್‌ಸಿ ಸಂಚಾರಿ ನ್ಯಾಯಾಲಯ ಉದ್ಘಾಟಿಸಿ, ಜ್ಯೋತಿ ಬೆಳಗಿಸಿ ಮಾತನಾಡಿದ ಅವರು,
ಮಹನೀಯ ಡಿ.ವಿ. ಗುಂಡಪ್ಪ ಅವರ ತತ್ವಪದಗಳನ್ನು ಸ್ಮರಿಸಿದರು. ಪ್ರತಿದಿನ ಆತ್ಮಪರೀಕ್ಷೆ, ಮನಶ್ಶೋಧನೆ, ಧರ್ಮಚಿಂತನೆ ಹಾಗೂ ಲೋಕಹಿತ ಸೇವನೆ ದೈವನಿಷ್ಠೆಯ ಲಕ್ಷಣಗಳಾಗಿವೆ ಎಂದರು.
ನ್ಯಾಯಾಂಗ ವ್ಯವಸ್ಥೆಯ ಮೇಲೆ ಸಾರ್ವಜನಿಕರು ಇಟ್ಟಿರುವ ನಂಬಿಕೆಯನ್ನು ಉಳಿಸಿಕೊಳ್ಳುವುದು ನ್ಯಾಯಾಧೀಶರು ಹಾಗೂ ವಕೀಲರ ಪ್ರಮುಖ ಜವಾಬ್ದಾರಿಯಾಗಿದೆ. ಕಕ್ಷಿದಾರರ ಸಮಸ್ಯೆಗಳನ್ನು ಮಾನವೀಯತೆಯಿಂದ ಆಲಿಸಿ, ಕಾನೂನಿನ ಚೌಕಟ್ಟಿನಲ್ಲಿ ನ್ಯಾಯಯುತ ಹಾಗೂ ತ್ವರಿತ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಎಲ್ಲರೂ ಕಾರ್ಯನಿರ್ವಹಿಸಬೇಕು ಎಂದು ಸಲಹೆ ನೀಡಿದರು.
ಬಾಗೇಪಲ್ಲಿ ಶಾಸಕ ಎಸ್.ಎನ್. ಸುಬ್ಬಾರೆಡ್ಡಿ ಮಾತನಾಡಿ, ಚೇಳೂರು ತಾಲೂಕಿನ ಗಡಿಭಾಗದ ಜನರು ಸಣ್ಣಪುಟ್ಟ ನ್ಯಾಯಾಂಗ ಕೆಲಸಗಳಿಗೂ ಸುಮಾರು 40 ಕಿ.ಮೀ. ದೂರದ ಬಾಗೇಪಲ್ಲಿಗೆ ತೆರಳಬೇಕಾಗಿತ್ತು. ಇದೀಗ ಚೇಳೂರಿನಲ್ಲಿಯೇ ನ್ಯಾಯಾಲಯ ಆರಂಭವಾಗಿರುವುದರಿಂದ ಈ ಭಾಗದ ಬಡ ಜನರಿಗೆ ಹೆಚ್ಚಿನ ಅನುಕೂಲವಾಗಲಿದೆ ಎಂದರು.
ತಾಲೂಕಿನ ಸಮಗ್ರ ಅಭಿವೃದ್ಧಿಗಾಗಿ ಈಗಾಗಲೇ 20 ಎಕರೆ ಜಾಗ ಗುರುತಿಸಲಾಗಿದ್ದು, 18ಕ್ಕೂ ಹೆಚ್ಚು ತಾಲೂಕು ಮಟ್ಟದ ಕಚೇರಿಗಳ ಸ್ಥಾಪನೆಗೆ ಚಾಲನೆ ನೀಡಲಾಗುತ್ತಿದೆ. ಶೀಘ್ರದಲ್ಲೇ ಸುಮಾರು ₹10 ಕೋಟಿ ವೆಚ್ಚದಲ್ಲಿ ನೂತನ ಆಡಳಿತ ಸೌಧ ನಿರ್ಮಾಣಕ್ಕೆ ಭೂಮಿಪೂಜೆ ನೆರವೇರಿಸಲಾಗುವುದು ಎಂದು ತಿಳಿಸಿದರು.
ಚಿಕ್ಕಬಳ್ಳಾಪುರ ಸಂಸದ ಡಾ. ಕೆ. ಸುಧಾಕರ್ ಮಾತನಾಡಿ, ಪ್ರಜಾಪ್ರಭುತ್ವದ ಯಶಸ್ಸಿಗೆ ಶಾಸಕಾಂಗ, ಕಾರ್ಯಾಂಗ ಹಾಗೂ ನ್ಯಾಯಾಂಗಗಳ ಸಮನ್ವಯ ಅಗತ್ಯ. ಸರ್ಕಾರ ಮತ್ತು ಕಾರ್ಯಾಂಗದ ಲೋಪಗಳನ್ನು ನಿರ್ಭಯವಾಗಿ ತಿದ್ದುವ ಶಕ್ತಿ ನ್ಯಾಯಾಂಗಕ್ಕಿದೆ. ಕೇಂದ್ರ ಸರ್ಕಾರದ ಡಿಜಿಟಲ್ ಕೋರ್ಟ್ ಯೋಜನೆಯಡಿ ನ್ಯಾಯಾಲಯಗಳ ಸೌಲಭ್ಯ ಹೆಚ್ಚಿಸಲಾಗುತ್ತಿದ್ದು, ಇದರಿಂದ ಸಾರ್ವಜನಿಕರಿಗೆ ಸುಲಭವಾಗಿ ನ್ಯಾಯ ದೊರೆಯಲಿದೆ ಎಂದರು.
ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿ ಜಿ. ಪ್ರಭು ಮಾತನಾಡಿ, ಪ್ರಜಾಪ್ರಭುತ್ವ ಹಾಗೂ ಸ್ವತಂತ್ರ ನ್ಯಾಯಾಂಗ ವ್ಯವಸ್ಥೆ ಅತ್ಯಂತ ನಂಬಿಕಾರ್ಹ ವ್ಯವಸ್ಥೆಗಳಾಗಿವೆ. ಜಿಲ್ಲಾಡಳಿತ ಹಾಗೂ ತಾಲೂಕು ಆಡಳಿತವು ನ್ಯಾಯಾಂಗ ವ್ಯವಸ್ಥೆಯನ್ನು ಬಲಪಡಿಸಲು ಸಂಪೂರ್ಣ ಸಹಕಾರ ನೀಡಲಿದೆ ಎಂದು ತಿಳಿಸಿದರು.
ಗಣ್ಯರು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದ ಕಾರ್ಯಕ್ರಮವು ಶಾಂತಿಯುತವಾಗಿ ಹಾಗೂ ಶಿಸ್ತುಬದ್ಧವಾಗಿ ನಡೆಯಲು ಇನ್ಸ್ಪೆಕ್ಟರ್ ಶ್ರೀನಿವಾಸ್ ಎಂ. ಅವರ ನೇತೃತ್ವದಲ್ಲಿ ಪೊಲೀಸ್ ಇಲಾಖೆಯಿಂದ ಸೂಕ್ತ ಬಂದೋಬಸ್ತ್ ಏರ್ಪಡಿಸಲಾಗಿತ್ತು.
ಕಾರ್ಯಕ್ರಮದಲ್ಲಿ ಜಿಲ್ಲಾ ಪ್ರಧಾನ ಹಾಗೂ ಸತ್ರ ನ್ಯಾಯಾಧೀಶ ಟಿ.ಪಿ. ರಾಮಲಿಂಗೇಗೌಡ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪದ್ಮಿನಿ ಸಾಹೂ, ಬಾಗೇಪಲ್ಲಿ ನ್ಯಾಯಾಲಯದ ಹಿರಿಯ ಸಿವಿಲ್ ನ್ಯಾಯಾಧೀಶೆ ಭಾರತಿ, ಅಶ್ವಿನ್,ಸಿಇಓ ನವೀನ್ ಭಟ್,ತಹಶೀಲ್ದಾರ್ ಶ್ವೇತ ಬಿಕೆ,ಮನಿಷಾ ಪತ್ರಿ,ಇಓ ನಾಗಮಣಿ, ವಕೀಲರು, ತಾಲೂಕು ಮಟ್ಟದ ಅಧಿಕಾರಿಗಳು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.
ವರದಿ : ಯಾರಬ್. ಎಂ.


