ಬೆಂಗಳೂರು: ಅನುಕಂಪ ಆಧಾರಿತ ಉದ್ಯೋಗ ನಿರಂತರ ಸೌಲಭ್ಯವಲ್ಲ, ಸಂಕಷ್ಟದ ಕುಟುಂಬಕ್ಕೆ ತಕ್ಷಣದ ನೆರವು ನೀಡುವ ಒಂದು ಸಲದ ಕ್ರಮ ಎಂದು ಹೈಕೋರ್ಟ್ ಆದೇಶಿಸಿದೆ.
ಕುಟುಂಬದ ಆಧಾರ ಸ್ತಂಭ ಮತ್ತು ಮುಖ್ಯ ಆದಾಯದ ಮೂಲವಾದ ಸರ್ಕಾರಿ ನೌಕರನ ಸಾವಿನಿಂದ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ ಆತನ ಕುಟುಂಬಕ್ಕೆ ತಕ್ಷಣದ ನೆರವು ನೀಡುವುದೇ ಅನುಕಂಪ ಆಧಾರದ ಮೇಲಿನ ನೇಮಕಾತಿಯ ಮೂಲ ಉದ್ದೇಶವಾಗಿದೆ.
ಕೇವಲ ಒಂದು ಸಲದ ಕ್ರಮ ಇದಾಗಿದ್ದು, ನಿರಂತರವಾಗಿ ಲಭ್ಯವಿರುವ ಸೌಲಭ್ಯವನ್ನಾಗಿ ಪರಿವರ್ತಿಸಲು ಸಾಧ್ಯವಿಲ್ಲ ಎಂದು ಹೈಕೋರ್ಟು ಆದೇಶ ಹೊರಡಿಸಿದೆ.
ಅನುಕಂಪ ಆಧಾರದಲ್ಲಿ ದ್ವಿತೀಯ ದರ್ಜೆ ಸಹಾಯಕ ಹುದ್ದೆಗೆ ನೇಮಕವಾಗಿದ್ದ ಇಬ್ಬರು ನೌಕರರಿಗೆ ಉನ್ನತ ಶೈಕ್ಷಣಿಕ ಅರ್ಹತೆ ಇದೆ ಎನ್ನುವ ಕಾರಣಕ್ಕೆ ಪ್ರಥಮ ದರ್ಜೆ ಸಹಾಯಕ ಹುದ್ದೆಗೆ ಪರಿಗಣಿಸುವಂತೆ ಸರ್ಕಾರಕ್ಕೆ ಸೂಚಿಸಿ ಕರ್ನಾಟಕ ಆಡಳಿತಾತ್ಮಕ ನ್ಯಾಯಮಂಡಳಿ(KAT) ನೀಡಿದ ಆದೇಶವನ್ನು ರದ್ದು ಮಾಡಿದ ಹೈಕೋರ್ಟ್ ನಿಂದ ಈ ಆದೇಶ ನೀಡಲಾಗಿದೆ.
ಕೆಎಟಿ ಆದೇಶ ಪ್ರಶ್ನಿಸಿ ರಾಜ್ಯ ಸರ್ಕಾರ ಸಲ್ಲಿಸಿದ್ದ ಅರ್ಜಿಯನ್ನು ಪುರಸ್ಕರಿಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಮತ್ತು ನ್ಯಾಯಮೂರ್ತಿ ಹೇಮಾ ಕುಲಕರ್ಣಿ ಅವರಿದ್ದ ವಿಭಾಗೀಯ ಪೀಠದಿಂದ ಈ ಆದೇಶ ನೀಡಲಾಗಿದೆ.
ಒಂದು ಸಲ ಅನುಕಂಪದ ಆಧಾರದ ಮೇಲೆ ಸಾರ್ವಜನಿಕ ಉದ್ಯೋಗ ದೊರೆತು ಆ ನೇಮಕಾತಿಯನ್ನು ಸ್ವೀಕರಿಸಿದ ಬಳಿಕ ನೇಮಕಾವಾದ ವ್ಯಕ್ತಿ ನಿರ್ದಿಷ್ಟ ಹುದ್ದೆಗಳಿಗೆ ಅಗತ್ಯ ಅರ್ಹತೆ ಹೊಂದಿದ್ದಾರೆ ಎನ್ನುವ ಕಾರಣಕ್ಕಾಗಿಯೇ ಆ ಅನುಕಂಪದ ಆಧಾರ ಬಳಸಿಕೊಂಡು ಉನ್ನತ ಹುದ್ದೆಗಳು ಉತ್ತಮ ಶ್ರೇಣಿ ಅಥವಾ ಹೆಚ್ಚಿನ ಸೇವಾ ಸೌಲಭ್ಯಕ್ಕಾಗಿ ನಿರಂತರವಾಗಿ ಬೇಡಿಕೆ ಸಲ್ಲಿಸಲು ಅವಕಾಶ ನೀಡುವುದಿಲ್ಲ. ಆ ಯೋಜನೆ ಅಡಿ ಉದ್ದೇಶಿಸಲಾದ ಹುದ್ದೆಗೆ ನೇಮಕಾತಿ ಮಾಡುವ ಮೂಲಕ ಯೋಜನೆಯ ಮೂಲ ಉದ್ದೇಶ ಈಡೇರಿದ ನಂತರ ಮತ್ತೊಂದು ಉನ್ನತ ಹುದ್ದೆ ಪಡೆಯಲು ಅನುಕಂಪದ ಆಧಾರವನ್ನು ಮತ್ತೆ ಬಳಸಿಕೊಳ್ಳಲು ಸಾಧ್ಯವಿಲ್ಲ ಎಂದು ನ್ಯಾಯಪೀಠ ತಿಳಿಸಿದೆ.


