ಬೆಂಗಳೂರು: ಸೂಪರ್ಸ್ಟಾರ್ ರಜನಿಕಾಂತ್ ಅವರು ತಮ್ಮ ಹಿರಿಯ ಸಹೋದರ ಸತ್ಯನಾರಾಯಣ ರಾವ್ ಗಾಯಕ್ವಾಡ್ (Satyanayana Rao) ಅವರ ಆರೋಗ್ಯ ವಿಚಾರಿಸಲು ಗುರುವಾರ ಬೆಂಗಳೂರಿಗೆ (Bengaluru) ದಿಢೀರ್ ಭೇಟಿ ನೀಡಿದ್ದಾರೆ.
ರಾಜರಾಜೇಶ್ವರಿ ನಗರದ ಜಯದೇವ್ ಮೆಮೋರಿಯಲ್ ರಾಷ್ಟ್ರೋತ್ಥಾನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸಹೋದರನನ್ನು ಭೇಟಿಯಾದ ರಜನಿಕಾಂತ್, ವೈದ್ಯರಿಂದ ಅವರ ಆರೋಗ್ಯದ ಕುರಿತು ಮಾಹಿತಿ ಪಡೆದುಕೊಂಡಿದ್ದಾರೆ ಎಂದು ಬೆಂಗಳೂರು ವೈರ್ ವರದಿ ಮಾಡಿದೆ.
ಪೂಜೆ ವೇಳೆ ಆಯತಪ್ಪಿ ಬಿದ್ದು ಗಾಯ!
ವಿಜಯದಶಮಿ ಹಬ್ಬದ ದಿನ ಮನೆಯಲ್ಲಿ ಪೂಜೆ ಮಾಡುತ್ತಿದ್ದ ಸಂದರ್ಭದಲ್ಲಿ ಸತ್ಯನಾರಾಯಣ ರಾವ್ ಅವರು ಸ್ಟೂಲ್ನಿಂದ ಆಯತಪ್ಪಿ ಬಿದ್ದಿದ್ದರು ಎನ್ನಲಾಗಿದೆ.
ತಲೆಗೆ ಗಂಭೀರ ಪೆಟ್ಟಾದ ಹಿನ್ನೆಲೆಯಲ್ಲಿ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ವೈದ್ಯಕೀಯ ಪರೀಕ್ಷೆಯಲ್ಲಿ ಮೆದುಳಿನಲ್ಲಿ ರಕ್ತ ಹೆಪ್ಪುಗಟ್ಟಿರುವುದು ಪತ್ತೆಯಾಗಿದ್ದು, ಸೋಮವಾರ ವೈದ್ಯರು ಶಸ್ತ್ರಚಿಕಿತ್ಸೆ ನಡೆಸಿದ್ದರು ಎಂದು ವರದಿಯಾಗಿದೆ.


