ಬೆಂಗಳೂರು: ಎಸ್ಸಿ - ಎಸ್ಟಿ ಸಮುದಾಯ ಮೀಸಲಾತಿ ಪ್ರಮಾಣವನ್ನು ಹೆಚ್ಚಿಸುವ ಕಾಯ್ದೆಯನ್ನು ಇತ್ತೀಚೆಗೆ ಹೈಕೋರ್ಟ್ ರದ್ದುಪಡಿಸಿದ್ದರ ಹಿನ್ನೆಲೆಯಲ್ಲಿ ವಿವಿಧ ಇಲಾಖೆಗಳಲ್ಲಿನ 1,261 ಹುದ್ದೆಗಳ ನೇಮಕಾತಿ ಪ್ರಕ್ರಿಯೆಯನ್ನು ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್ಸಿ) ತಾತ್ಕಾಲಿಕವಾಗಿ ತಡೆಹಿಡಿದಿದೆ.
ಈ ಹುದ್ದೆಗಳಲ್ಲಿ 2023-24ನೇ ಸಾಲಿನ 384 ಗೆಜೆಟೆಡ್ ಪ್ರೊಬೆಷನರಿ ಹುದ್ದೆಗಳೂ ಸೇರಿದ್ದು, ಈಗಾಗಲೇ ಅಂತಿಮ ಪರೀಕ್ಷೆ, ವ್ಯಕ್ತಿತ್ವ ಪರೀಕ್ಷೆಯನ್ನೂ ಪೂರೈಸಿ ಅಂತಿಮ ಪಟ್ಟಿಗೆ ಕಾಯುತ್ತಿರುವ ಅಭ್ಯರ್ಥಿಗಳ ಆಯ್ಕೆ ಅತಂತ್ರವಾಗಿದೆ.
ರಾಜ್ಯ ನಾಗರಿಕ ಸೇವೆಯಲ್ಲಿನ ಹುದ್ದೆಗಳ ನೇರ ನೇಮಕಾತಿಗೆ ಸಂಬಂಧಿಸಿದಂತೆ ಕರ್ನಾಟಕ ಅನುಸೂಚಿತ ಜಾತಿಗಳು ಮತ್ತು ಅನುಸೂಚಿತ ಪಂಗಡಗಳು (ಶೈಕ್ಷಣಿಕ ಸಂಸ್ಥೆಗಳಲ್ಲಿನ ಸ್ಥಾನಗಳಲ್ಲಿ ಮತ್ತು ರಾಜ್ಯಾಧೀನ ಸೇವೆಗಳಲ್ಲಿನ ನೇಮಕಾತಿ ಅಥವಾ ಹುದ್ದೆಗಳಲ್ಲಿ ಮೀಸಲಾತಿ) ಕಾಯ್ದೆ-2022 ಅನ್ನು ಅಂದಿನ ಬಿಜೆಪಿ ಸರ್ಕಾರ ಅನುಷ್ಠಾನ ಮಾಡಿತ್ತು.
ಅದರ ಅನ್ವಯ ನೇರ ನೇಮಕಾತಿಯಲ್ಲಿ ಮೀಸಲಾತಿಯನ್ನು ಎಸ್ಸಿ ಪಂಗಡಗಳಿಗೆ ಶೇ.15ರಿಂದ ಶೇ.17ಕ್ಕೆ ಹಾಗೂ ಎಸ್ಟಿ ಪಂಗಡಗಳಿಗೆ ಶೇ.3ರಿಂದ ಶೇ.7ಕ್ಕೆ ಹೆಚ್ಚಳ ಮಾಡಲಾಗಿತ್ತು.
ಇದಕ್ಕೆ ಅನುಗುಣವಾಗಿ ರೋಸ್ಟರ್ ಬಿಂದುಗಳನ್ನು ಗುರುತಿಸಿ ಆದೇಶ ಜಾರಿ ಮಾಡಿ, 2,610 ಹುದ್ದೆಗಳ ನೇಮಕಾತಿಗಾಗಿ ಆಯೋಗದಲ್ಲಿ ಒಟ್ಟು 18 ಅಧಿಸೂಚನೆಗಳನ್ನು ಕೆಪಿಎಸ್ಸಿ ಹೊರಡಿಸಿತ್ತು.
ಈ ನಡುವೆ ಕಾಯ್ದೆ ವಿರುದ್ಧ ದಾಖಲಾದ ಪ್ರಕರಣದಲ್ಲಿ ಹೈಕೋರ್ಟ್ ನೀಡಿದ ಮಧ್ಯಂತರ ಆದೇಶದ ಅನ್ವಯ ಅಂತಿಮ ಆದೇಶಕ್ಕೆ ಒಳಪಟ್ಟಂತೆ ಈ 18 ಅಧಿಸೂಚನೆಗಳ ನೇಮಕಾತಿ ಪ್ರಕ್ರಿಯೆಗಳನ್ನು ಮುಂದುವರಿಸಲಾಗಿತ್ತು.


