ಮೈಸೂರು: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮೈಸೂರಿನ ಕುವೆಂಪುನಗರದಲ್ಲಿ ನಿರ್ಮಿಸಿರುವ ತಮ್ಮ ನೂತನ ನಿವಾಸಕ್ಕೆ ಸರಳವಾಗಿ ಗೃಹಪ್ರವೇಶ ಮಾಡಿದ್ದಾರೆ.
ಮನೆಯಲ್ಲಿ ಗಣಪತಿ ಹೋಮ, ವಾಸ್ತು ಹೋಮ ಸೇರಿದಂತೆ ವಿವಿಧ ಸಾಂಪ್ರದಾಯಿಕ ಧಾರ್ಮಿಕ ವಿಧಿ-ವಿಧಾನಗಳು ನಡೆದವು.
ಸೋಮವಾರ ಮುಂಜಾನೆ ಸಿದ್ದರಾಮಯ್ಯ ಹಾಗೂ ಪತ್ನಿ ಪಾರ್ವತಿ ಅವರ ನೇತೃತ್ವದಲ್ಲಿ ಪೂರ್ಣಾಹುತಿ ಮತ್ತು ಗೃಹಪ್ರವೇಶದ ವಿಧಿಗಳು ಸಂಪನ್ನಗೊಂಡವು.
ಕಾರ್ಯಕ್ರಮದಲ್ಲಿ ಸಿದ್ದರಾಮಯ್ಯ ಅವರ ಪುತ್ರ, ಶಾಸಕ ಯತೀಂದ್ರ ಸಿದ್ದರಾಮಯ್ಯ ಹಾಗೂ ತೀರ ಹತ್ತಿರದ ಕುಟುಂಬದ ಸದಸ್ಯರು ಮಾತ್ರ ಭಾಗಿಯಾಗಿದ್ದರು. ಯಾವುದೇ ರಾಜಕೀಯ ಗಣ್ಯರಿಲ್ಲದೆ ಕುಟುಂಬಸ್ಥರ ಸಮ್ಮುಖದಲ್ಲಿ ಶಾಸ್ತ್ರೋಕ್ತ ಪೂಜೆ ನೆರವೇರಿಸಲಾಯಿತು.
ಸಿದ್ದರಾಮಯ್ಯ ಅವರಿಗೆ ಮೈಸೂರಿನಲ್ಲಿ ಸ್ವಂತ ಮನೆಯಿರಲಿಲ್ಲ. ಮೈಸೂರಿನಲ್ಲಿ ಸುಸಜ್ಜಿತ ಸ್ವಂತ ಮನೆಯೊಂದನ್ನು ನಿರ್ಮಿಸಬೇಕೆಂಬುದು ಅವರ ಪತ್ನಿ ಪಾರ್ವತಿಯವರ ದಶಕಗಳ ಕನಸಾಗಿತ್ತು.
ಇಷ್ಟು ವರ್ಷಗಳ ಕಾಲ ಸಿದ್ದರಾಮಯ್ಯ ಅವರು ಟಿ.ಕೆ. ಬಡಾವಣೆಯಲ್ಲಿರುವ ತಮ್ಮ ಆಪ್ತ ಸ್ನೇಹಿತ ಮರಿಸ್ವಾಮಿ ಅವರ ಮನೆಯಲ್ಲೇ ವಾಸ್ತವ್ಯ ಹೂಡಿದ್ದರು.
ಇದೀಗ ಬಾಡಿಗೆ ಮನೆಯಿಂದ ಹೊಸ ನಿವಾಸಕ್ಕೆ ಶಿಫ್ಟ್ ಆಗಿದ್ದಾರೆ. ಕುವೆಂಪುನಗರದ ಪ್ರಮುಖ ರಸ್ತೆಯ ಬಳಿ 120×80 ಅಡಿ ವಿಸ್ತೀರ್ಣದಲ್ಲಿ ಈ ಮೂರು ಅಂತಸ್ತಿನ ಬೃಹತ್ ಬಂಗಲೆಯನ್ನು ನಿರ್ಮಿಸಲಾಗಿದೆ.


