LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureRecipes
Crime News

ಕುಡಿಯಲು ಹಣ ನೀಡದ ಹೆತ್ತ ತಾಯಿಯನ್ನೇ ಹೊಡೆದು ಕೊಂದ ಪಾಪಿ ಮಗ 

Advertisement

ದಾವಣಗೆರೆ: ಕುಡಿಯಲು ಹಣ ಕೊಡಲು ನಿರಾಕರಿಸಿದ ಕಾರಣಕ್ಕೆ ವೃದ್ಧ ತಾಯಿಯನ್ನೇ ಮಗನೊಬ್ಬ ದೊಣ್ಣೆಯಿಂದ ತಲೆಗೆ ಹೊಡೆದು ಬರ್ಬರವಾಗಿ ಹತ್ಯೆಗೈದಿರುವ ಆಘಾತಕಾರಿ ಘಟನೆ ಜಿಲ್ಲೆಯ ಚನ್ನಗಿರಿ ತಾಲೂಕಿನ ದೊಡ್ಡಘಟ್ಟ ಗ್ರಾಮದಲ್ಲಿ ನಡೆದಿದೆ. ಗ್ರಾಮದ ನಿವಾಸಿ ಬುಳ್ಳಮ್ಮ (70) ಮಗನಿಂದಲೇ ಕೊಲೆಯಾದ ದುರ್ದೈವಿಯಾಗಿದ್ದು, ಆರೋಪಿ ಹನುಮಂತಪ್ಪನನ್ನು (35) ಗ್ರಾಮಸ್ಥರು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.

ಹತ್ತು ಮಕ್ಕಳನ್ನು ಸಾಕಿದ್ದ ತಾಯಿಗೆ ಒಬ್ಬನೇ ಮಗನಿಂದ ದ್ರೋಹ

ಮೃತ ಬುಳ್ಳಮ್ಮ ಅವರಿಗೆ ಒಟ್ಟು ಹತ್ತು ಮಕ್ಕಳಿದ್ದು, ಪತಿಯ ನಿಧನದ ನಂತರ ಕೂಲಿ-ನಾಲಿ ಮಾಡಿ ಕಷ್ಟಪಟ್ಟು ಎಲ್ಲರನ್ನೂ ಬೆಳೆಸಿದ್ದರು. ಒಂಬತ್ತು ಹೆಣ್ಣು ಮಕ್ಕಳ ವಿವಾಹ ನೆರವೇರಿಸಿದ್ದ ಅವರು, ಒಬ್ಬನೇ ಮಗನಾದ ಹನುಮಂತಪ್ಪನ ಮೇಲೆ ಅಪಾರ ಪ್ರೀತಿ ಇಟ್ಟುಕೊಂಡಿದ್ದರು.

ಆದರೆ, ದುಶ್ಚಟಗಳಿಗೆ ದಾಸನಾಗಿದ್ದ ಹನುಮಂತಪ್ಪ ಅಪರಾಧ ಕೃತ್ಯಗಳಲ್ಲಿ ತೊಡಗಿಕೊಂಡು ತಾಯಿಯನ್ನು ನಿರ್ಲಕ್ಷಿಸಿದ್ದ. ಈ ಹಿಂದೆ ಹಣಕಾಸಿನ ವಿಚಾರಕ್ಕೆ ತನ್ನ ಸ್ನೇಹಿತನನ್ನೇ ಕೊಲೆ ಮಾಡಿದ್ದ ಈತ, ಏಳು ವರ್ಷಗಳ ಕಾಲ ಜೈಲು ಶಿಕ್ಷೆ ಅನುಭವಿಸಿದ್ದ. ಮಗ ಜೈಲು ಸೇರಿದ ಕೊರಗಿನಲ್ಲೇ ಬುಳ್ಳಮ್ಮ ಅನಾರೋಗ್ಯಕ್ಕೆ ತುತ್ತಾಗಿ ಹಾಸಿಗೆ ಹಿಡಿದಿದ್ದರು. 

ತಾಯಿಯ ನೋವು ನೋಡಲಾಗದೆ ಒಂಬತ್ತು ಜನ ಅಕ್ಕ-ತಂಗಿಯರು ಸೇರಿ ಬರೋಬ್ಬರಿ 10 ಲಕ್ಷ ರೂಪಾಯಿ ಖರ್ಚು ಮಾಡಿ, ಕಳೆದ ಮೂರು ತಿಂಗಳ ಹಿಂದಷ್ಟೇ ಜಾಮೀನಿನ ಮೇಲೆ ಸಹೋದರನನ್ನು ಜೈಲಿನಿಂದ ಬಿಡಿಸಿ ತಂದಿದ್ದರು.

ಬುಳ್ಳಮ್ಮ ಅವರು ತಮ್ಮ ಮಗಳ ಮನೆಯಲ್ಲಿ ಆಶ್ರಯ ಪಡೆದಿದ್ದರು. ಜೈಲಿನಿಂದ ಬಂದ ಬಳಿಕ ದಾವಣಗೆರೆಯ ಹೋಟೆಲ್ ಒಂದರಲ್ಲಿ ಕೆಲಸ ಮಾಡಿಕೊಂಡಿದ್ದ ಹನುಮಂತಪ್ಪನನ್ನು ನೋಡಬೇಕೆಂಬ ಹಂಬಲದಿಂದ ತಾಯಿಯೇ ಎರಡು ದಿನಗಳ ಹಿಂದೆ ಮನೆಗೆ ಕರೆಸಿಕೊಂಡಿದ್ದರು. ಬುಳ್ಳಮ್ಮ ಅವರು ಎರಡು ದಿನಗಳ ಹಿಂದಷ್ಟೇ 6,000 ರೂಪಾಯಿ ಹಣವನ್ನು ಬಿಡಿಸಿಕೊಂಡು ತಮ್ಮ ಬಳಿ ಇಟ್ಟುಕೊಂಡಿದ್ದರು.

ಈ ವಿಷಯ ತಿಳಿದಿದ್ದ ಹನುಮಂತಪ್ಪ, ಕಳೆದ ರಾತ್ರಿ ಅಕ್ಕನ ಮನೆಯಲ್ಲಿ ಊಟ ಮುಗಿಸಿ ತಾಯಿಯನ್ನು ಮಾತನಾಡಿಸಿಕೊಂಡು ಬರುವುದಾಗಿ ಹೇಳಿ ಹೋಗಿದ್ದ. ಪಾನಮತ್ತನಾಗಿದ್ದ ಆತ ತಾಯಿಯ ಬಳಿ ಹಣಕ್ಕೆ ಬೇಡಿಕೆಯಿಟ್ಟಿದ್ದಾನೆ. ಹಣ ಕೊಟ್ಟರೆ ಕುಡಿದು ಹಾಳು ಮಾಡುತ್ತಾನೆ ಎಂಬ ಕಾರಣಕ್ಕೆ ಬುಳ್ಳಮ್ಮ ಹಣ ನೀಡಲು ನಿರಾಕರಿಸಿದ್ದಾರೆ.

ಇದರಿಂದ ಕುಪಿತಗೊಂಡ ಹನುಮಂತಪ್ಪ, ಪಕ್ಕದಲ್ಲಿದ್ದ ದೊಣ್ಣೆಯಿಂದ ತಾಯಿಯ ತಲೆಗೆ ಬಲವಾಗಿ ಹೊಡೆದು ಹತ್ಯೆ ಮಾಡಿದ್ದಾನೆ. ಬಳಿಕ ಕೃತ್ಯವನ್ನು ಮರೆಮಾಚಲು ಮೃತದೇಹದ ಮೇಲೆ ಬೆಡ್‌ಶೀಟ್ ಹೊದಿಸಿ ಸುಮ್ಮನಾಗಿದ್ದ

ಪ್ರಕರಣ ಬಯಲಿಗೆ ಬಂದಿದ್ದು ಹೇಗೆ?

ತಾಯಿಯನ್ನು ಮಾತನಾಡಿಸಲು ಹೋದ ಸಹೋದರ ಬಹಳ ಹೊತ್ತಾದರೂ ವಾಪಸ್ ಬಾರದಿರುವುದನ್ನು ಗಮನಿಸಿದ ಆತನ ಅಕ್ಕ ಶಾರದಮ್ಮ, ಅನುಮಾನಗೊಂಡು ತಾಯಿಯ ಕೋಣೆಗೆ ಹೋಗಿ ನೋಡಿದಾಗ ರಕ್ತದ ಮಡುವಿನಲ್ಲಿ ಬಿದ್ದಿದ್ದ ಬುಳ್ಳಮ್ಮ ಅವರ ಮೃತದೇಹ ಕಂಡುಬಂದಿದೆ.

ತಕ್ಷಣವೇ ಶಾರದಮ್ಮ ಕೂಗಿಕೊಂಡಿದ್ದು, ಸ್ಥಳಕ್ಕೆ ಧಾವಿಸಿದ ಗ್ರಾಮಸ್ಥರು ಆರೋಪಿ ಹನುಮಂತಪ್ಪನನ್ನು ಹಿಡಿದು ಕಟ್ಟಿಹಾಕಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. 

ಘಟನಾ ಸ್ಥಳಕ್ಕೆ ಬಸವಪಟ್ಟಣ ಪೊಲೀಸ್ ಠಾಣೆಯ ಸಿಪಿಐ ಮಲ್ಲಮ್ಮ ಚೌಬೇ ಹಾಗೂ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.

 

Advertisement
Advertisement

Author
Bharath Vaibhav
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಸೈಯದ್ ಮುಸ್ತಾಕ್ ಅಲಿ ಟಿ-20 : ಕರ್ನಾಟಕ ಶುಭಾರಂಭ2,000ಕ್ಕೆ ಮರುಳಾಗಬೇಡಿ, 5,000 ರೂ. ಬರುವಂತೆ ಮಾಡಬಲ್ಲೆ: ಕುಮಾರಸ್ವಾಮಿ 600ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿದ್ದ ಹಿರಿಯ ತೆಲುಗು ನಟ ಗಿರಿಬಾಬು ನಿಧನಅಯ್ಯಪ್ಪ ಭಕ್ತರಿಗೆ ಸಿಹಿ ಸುದ್ದಿ :  2 ಲಕ್ಷ ಉಚಿತ ಜೀವ ವಿಮೆ, ಮನೆಯ ಬಾಗಿಲಿಗೇ ಪ್ರಸಾದ RSSಗೂ ನೋಂದಣಿ ಮಾಡಿಸಲಿದ್ದೇನೆ: ಪ್ರಿಯಾಂಕ್ ಖರ್ಗೆಭಾರತ ಕಿರಿಯರ ತಂಡಕ್ಕೆ 338 ರನ್ ಗಳ ಗೆಲುವಿನ ಗುರಿ 15 ಸಾವಿರ ರೂ. ಸಂಬಳ ಪಡೆಯುವ ಯುವಕನ ಹೆಸರಿನಲ್ಲಿ 350 ಕೋಟಿ ರೂ. ವಂಚನೆ538 ಕೋಟಿ ರೂ. ಕೊಟ್ಟು ಕೋಟೆ ಖರೀದಿಸಿದ ಫೇಸ್‌ಬುಕ್‌ ಮಾಲಿಕ ಜುಕರ್‌ಬರ್ಗ್‌ಉಡುಪಿಗೆ ಬಂದ ಭೂಗತ ಪಾತಕಿ ರವಿ ಪೂಜಾರಿ :  ತಾಯಿಯ ಮೃತದೇಹದ ಮುಂದೆ ಬಿಕ್ಕಿ ಬಿಕ್ಕಿ ಅಳುಕಲಾದಗಿಯ ಶ್ರೀ ಗುರುಲಿಂಗೇಶ್ವರ ಪ್ರೌಢ ಶಾಲೆ : ಜವಾಹರಲಾಲ್ ನೆಹರು ಜನ್ಮದಿನದ ಹಾಗೂ ಮಕ್ಕಳ ದಿನಾಚರಣೆ ಆಚರಣೆ