ಬೆಂಗಳೂರು: ಬೆಳಗಾವಿಯಲ್ಲಿ ನಡೆದು ಇಡೀ ರಾಜ್ಯಾದ್ಯಂತ ತೀವ್ರ ಸಂಚಲನ ಮೂಡಿಸಿದ್ದ ಸುಮಾರು 4,500 ಕೋಟಿ ರೂಪಾಯಿಗಳ ಬೃಹತ್ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಪ್ರಮುಖ ಆರೋಪಿ ಶಿವಾನಂದ ನೀಲಣ್ಣನವರ್‌ಗೆ ಬೆಂಗಳೂರಿನ ನ್ಯಾಯಾಲಯವು ಮಧ್ಯಂತರ ಜಾಮೀನು ಮಂಜೂರು ಮಾಡಿದೆ.ಈ ಆದೇಶವು ಪ್ರಕರಣದ ತನಿಖೆಯ ಹಂತದಲ್ಲಿ ಅತ್ಯಂತ ಪ್ರಮುಖ ಬೆಳವಣಿಗೆಯಾಗಿ ಹೊರಹೊಮ್ಮಿದೆ.
ಬೆಂಗಳೂರಿನ 93ನೇ ಸಿಟಿ ಸಿವಿಲ್ ಹಾಗೂ ಸೆಷನ್ಸ್ ನ್ಯಾಯಾಲಯವು ಆರೋಪಿಯ ಜಾಮೀನು ಅರ್ಜಿಯ ಸುದೀರ್ಘ ವಿಚಾರಣೆ ನಡೆಸಿತು.
ಉಭಯ ಪಕ್ಷಗಳ ವಾದ-ಪ್ರತಿವಾದಗಳನ್ನು ಆಲಿಸಿದ ಬಳಿಕ, ನ್ಯಾಯಾಧೀಶರು ಕೆಲವು ಕಠಿಣ ಷರತ್ತುಗಳನ್ನು ವಿಧಿಸುವ ಮೂಲಕ ಆರೋಪಿಗೆ ಮಧ್ಯಂತರ ಜಾಮೀನು ನೀಡಿ ಆದೇಶ ಪ್ರಕಟಿಸಿದ್ದಾರೆ.
ನ್ಯಾಯಾಲಯವು ಜಾಮೀನು ನೀಡುವಾಗ ಮುಖ್ಯವಾಗಿ ಆರ್ಥಿಕ ಶೂರಿಟಿಗೆ ಒತ್ತು ನೀಡಿದೆ. ಆರೋಪಿ ಶಿವಾನಂದ ನೀಲಣ್ಣನವರ್ 3 ಲಕ್ಷ ರೂಪಾಯಿ ಮೊತ್ತದ ಬಾಂಡ್ ಹಾಗೂ ಒಬ್ಬರ ಭದ್ರತೆ (ಶೂರಿಟಿ)ಯನ್ನು ಒದಗಿಸಬೇಕು ಎಂದು ಸೂಚಿಸಿದೆ. ಈ ಶರತ್ತನ್ನು ಪೂರೈಸಿದ ಬಳಿಕವಷ್ಟೇ ಆರೋಪಿಯ ಬಿಡುಗಡೆಗೆ ಕಾನೂನು ಪ್ರಕ್ರಿಯೆಗಳು ಚಾಲನೆ ಪಡೆಯಲಿವೆ.
ನ್ಯಾಯಾಲಯದ ಪ್ರಮುಖ ಷರತ್ತುಗಳು:
3 ಲಕ್ಷ ರೂಪಾಯಿ ಮುಚ್ಚಳಿಕೆ ಬಾಂಡ್ ಮತ್ತು ಒಬ್ಬರ ಶೂರಿಟಿ ಒದಗಿಸುವುದು.
ಯಾವುದೇ ಕಾರಣಕ್ಕೂ ಭಾರತ ದೇಶವನ್ನು ಬಿಟ್ಟು ತೆರಳುವಂತಿಲ್ಲ. ಕರೆದಾಗಲೆಲ್ಲಾ ಹಾಜರಾಗಿ ತನಿಖೆಗೆ ಪೂರ್ಣ ಸಹಕಾರ ನೀಡಬೇಕು.
ಕೋಟಿಗಟ್ಟಲೆ ಹಣದ ವಂಚನೆ ನಡೆದಿರುವ ಹಿನ್ನೆಲೆಯಲ್ಲಿ ಆರೋಪಿ ವಿದೇಶಕ್ಕೆ ಪಲಾಯನ ಮಾಡುವ ಸಾಧ್ಯತೆಗಳನ್ನು ಮನಗಂಡಿರುವ ನ್ಯಾಯಾಲಯ, ದೇಶ ಬಿಟ್ಟು ಹೋಗದಂತೆ ಕಟ್ಟುನಿಟ್ಟಿನ ಆದೇಶ ಮಾಡಿದೆ. ತನಿಖೆಯ ದಿಕ್ಕನ್ನು ತಪ್ಪಿಸದಂತೆ ಮತ್ತು ಸಾಕ್ಷ್ಯ ನಾಶಪಡಿಸದಂತೆ ಎಚ್ಚರಿಕೆ ವಹಿಸಲು ಸೂಚಿಸಲಾಗಿದೆ.


