ಬೆಂಗಳೂರು : ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿರುವ ನಟ ದರ್ಶನ್ ಕೊಂಚ ರಿಲೀಫ್ ಸಿಕ್ಕಂತಾಗಿದೆ.
ಜೈಲಿನ ನಿಯಮಾವಳಿಗಳ ಪ್ರಕಾರ ಅವರ ಪತ್ನಿ ವಿಜಯಲಕ್ಷ್ಮಿ ಹಾಗೂ ಪುತ್ರ ವಿನೀಶ್ ಅವರಿಗೆ ದರ್ಶನ್ ರನ್ನು ಭೇಟಿ ಮಾಡಲು ಜೈಲಾಧಿಕಾರಿಗಳು ಮತ್ತು ಹಿರಿಯ ಪೊಲೀಸ್ ಅಧಿಕಾರಿಗಳು ಅನುಮತಿ ನೀಡಿದ್ದಾರೆ.
ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜೈಲು ಪಾಲಾಗಿರುವ ಸ್ಯಾಂಡಲ್‌ವುಡ್ ನಟ ದರ್ಶನ್ ತೂಗುದೀಪ ಜೈಲಾಧಿಕಾರಿಗಳಿಗೆ ಪತ್ರವೊಂದನ್ನು ಬರೆದಿದ್ದರು.
ಜೈಲಿನಲ್ಲಿ ಭೇಟಿಯಾಗಲು ಬರುವ ತನ್ನ ಪತ್ನಿ ವಿಜಯಲಕ್ಷ್ಮಿ ಹಾಗೂ ಮಗ ವಿನೀಶ್ ಜೊತೆ ನಿಯಮಿತವಾಗಿ ಮಾತನಾಡಲು ಅನುಮತಿ ನೀಡಬೇಕೆಂದು ಅವರು ಈ ಪತ್ರದ ಮೂಲಕ ಕೋರಿದ್ದರು.
ಕುಟುಂಬದವರೊಂದಿಗೆ ಖಾಸಗಿ ಮಾತುಕತೆ: ಸಾಮಾನ್ಯವಾಗಿ ಜೈಲಿನಲ್ಲಿ ಕೈದಿಗಳನ್ನು ಭೇಟಿಯಾಗಲು ಬರುವವರಿಗೆ ಕಬ್ಬಿಣದ ಜಾಲರಿ ಅಥವಾ ಗ್ಲಾಸ್ ತಡೆಗೋಡೆಯ ಆಚೆ ನಿಂತು ಮಾತನಾಡಲು ಮಾತ್ರ ಅವಕಾಶವಿರುತ್ತದೆ. ಆದರೆ ದರ್ಶನ್ ಅವರು ತಮ್ಮ ಪತ್ನಿ ಮತ್ತು ಮಗನೊಂದಿಗೆ ಮುಖಾಮುಖಿಯಾಗಿ ಕೂತು ಮಾತನಾಡಲು ಪ್ರತ್ಯೇಕ ವ್ಯವಸ್ಥೆ (ಒಳಸಂದರ್ಶನ) ಕಲ್ಪಿಸಿಕೊಡಬೇಕು ಎಂದು ವಿನಂತಿಸಿದ್ದರು.
ಮಾನಸಿಕ ಒತ್ತಡ ಹಾಗೂ ಕಾನೂನು ಚರ್ಚೆ: ಜೈಲು ವಾಸದಿಂದಾಗಿ ಎದುರಿಸುತ್ತಿರುವ ಮಾನಸಿಕ ಸ್ಥಿತಿ, ಕುಟುಂಬದ ಜವಾಬ್ದಾರಿಗಳು ಹಾಗೂ ಸುಪ್ರೀಂ ಕೋರ್ಟ್‌ನಲ್ಲಿ ನಡೆಯುತ್ತಿರುವ ಜಾಮೀನು ಪ್ರಕ್ರಿಯೆಯ ಕಾನೂನು ಹೋರಾಟದ ಕುರಿತು ಹೆಂಡತಿಯೊಂದಿಗೆ ಸುದೀರ್ಘವಾಗಿ ಚರ್ಚಿಸಲು ಈ ಒಳಸಂದರ್ಶನದ ಅಗತ್ಯವಿದೆ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.

