ತುರುವೇಕೆರೆ : ಅಕ್ಷರ ಜ್ಞಾನದ ಜೊತೆಗೆ ವಿದ್ಯಾರ್ಥಿಗಳಲ್ಲಿ ನೈತಿಕ ಮೌಲ್ಯಗಳು, ಸಂಸ್ಕಾರ ಮತ್ತು ಆತ್ಮವಿಶ್ವಾಸವನ್ನು ತುಂಬುವ ಮಹತ್ತರ ಜವಾಬ್ದಾರಿ ಶಿಕ್ಷಕರ ಮೇಲಿದೆ ಎಂದು ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪ್ರಧಾನ ಕಾರ್ಯದರ್ಶಿ ಶ್ರೀ ಪ್ರಸನ್ನನಾಥ ಸ್ವಾಮೀಜಿ ತಿಳಿಸಿದರು.
ಪಟ್ಟಣದ ಗೆಳೆಯರ ಬಳಗದ ಆಶ್ರಯದಲ್ಲಿನ ಜೆಪಿ ಕಾನ್ವೆಂಟ್ ಮತ್ತು ಆಂಗ್ಲ ಪ್ರೌಢಶಾಲೆಯಲ್ಲಿ ಆಯೋಜಿಸಿದ್ದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ದಿವ್ಯ ಸಾನಿದ್ಯ ವಹಿಸಿ ಮಾತನಾಡಿದ ಅವರು, ಸಂಸ್ಕಾರವಿಲ್ಲದ ವಿದ್ಯೆ ನಿರರ್ಥಕ. ಮಕ್ಕಳಿಗೆ ಶಿಕ್ಷಣದ ಜೊತೆಗೆ ಮಾನವೀಯ ಮೌಲ್ಯಗಳು, ಆದರ್ಶನೀಯ ಗುಣಗಳನ್ನು ಬೆಳೆಸಬೇಕು. ಕೇವಲ ಪಠ್ಯಪುಸ್ತಕದ ಬೋದನೆಗಷ್ಟೇ ಸೀಮಿತವಾಗದೆ ಮಕ್ಕಳಲ್ಲಿರುವ ಆಸಕ್ತಿ, ಪ್ರತಿಭೆಯನ್ನು ಸಹ ಗುರುತಿಸಿ ಪ್ರೋತ್ಸಾಹಿಸುವ ಕೆಲಸವನ್ನು ಶಿಕ್ಷಕರು ಮಾಡಬೇಕಿದೆ. ಮಕ್ಕಳ ಪರಿಪೂರ್ಣ ವಿಕಸನದಲ್ಲಿ ಪೋಷಕರಷ್ಟೇ ಶಿಕ್ಷಕರ ಪಾತ್ರವೂ ಮಹತ್ವದ್ದಾಗಿದೆ ಎಂದರು.
ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿ ಎನ್ನುವ ನಾಣ್ಣುಡಿಯಂತೆ ಗುರು ಹಿರಿಯರಿಗೆ ಗೌರವ ಕೊಡುವ, ಅವರ ಮಾತಿನಂತೆ ನಡೆಯುವ ಸಂಸ್ಕಾರವನ್ನು ವಿದ್ಯಾರ್ಥಿಗಳು ಬೆಳೆಸಿಕೊಳ್ಳಬೇಕು. ವಿದ್ಯಾರ್ಥಿಗಳು ಮನೆಯಲ್ಲಿ ಪೋಷಕರು, ಶಾಲೆಯಲ್ಲಿ ಶಿಕ್ಷಕರ ಮಾತನ್ನು ಶಿರಸಾವಹಿಸಿ ಪಾಲಿಸುವುದರಿಂದ ಭವಿಷ್ಯದಲ್ಲಿ ಉತ್ತಮ ನಾಗರೀಕರಾಗಲು, ಯಶಸ್ವಿ ವ್ಯಕ್ತಿಯಾಗಿ ಸಾಧಕರ ಸಾಲಿನಲ್ಲಿ ಗುರುತಿಸಿಕೊಳ್ಳಲು ಸಾಧ್ಯವಾಗುತ್ತದೆ. ಗುರು ಮತ್ತು ಗುರಿ ಇದ್ದಾಗ ಮಾತ್ರ ವ್ಯಕ್ತಿ ಯಶಸ್ಸನ್ನು ಸಾಧಿಸಲು ಸಾಧ್ಯ ಎಂದ ಅವರು, ಪ್ರಸ್ತುತ ಪ್ರಪಂಚ ಜ್ಞಾನ, ವಿಜ್ಞಾನ, ತಂತ್ರಜ್ಞಾನದಲ್ಲಿ ಹೆಚ್ಚು ವೇಗವಾಗಿ ಬೆಳೆಯುತ್ತಿದೆ. ಸ್ಪರ್ಧಾತ್ಮಕ ಪ್ರಪಂಚದಲ್ಲಿ ನಾವು ಸ್ಪರ್ಧಿಸಿ ಗೆಲುವನ್ನು ಸಾಧಿಸಬೇಕಾದರೆ ಹೆಚ್ಚು ಅಧ್ಯಯನಶೀಲರಾಗಬೇಕು. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಅಧ್ಯಯನಕ್ಕೆ ಹೆಚ್ಚಿನ ಒತ್ತನ್ನು ನೀಡಬೇಕು ಎಂದರು.
ಸಮಾರಂಭದ ಅಧ್ಯಕ್ಷತೆಯನ್ನು ಸಂಸ್ಥೆಯ ಅಧ್ಯಕ್ಷ ಪ್ರಕಾಶ್ ಗುಪ್ತ ವಹಿಸಿದ್ದರು. ಸಂಸ್ಥೆಯ ಕಾರ್ಯದರ್ಶಿ ಜಿ.ಆರ್.ರಂಗೇಗೌಡ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಶಿಕ್ಷಕರ ದಿನಾಚರಣೆ ಅಂಗವಾಗಿ ಶಾಲೆಯ ಉತ್ತಮ ಶಿಕ್ಷಕರೆಂದು ಆಯ್ಕೆಯಾದ ಎಸ್.ಜಿ. ಉಮಾಶಂಕರ್, ಎಸ್.ಎಂ. ಮಹಾಲಕ್ಷ್ಮಿ, ವಿನುತಾ ಕೆ.ಎಸ್. ಅವರನ್ನು ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಸಂಸ್ಥೆಯ ಖಜಾಂಚಿ ಕೆ.ಟಿ.ಶಿವಣ್ಣ, ಸಹಕಾರ್ಯದರ್ಶಿ ಲಕ್ಷ್ಮೀನರಸಿಂಹ, ಆಡಳಿತಾಧಿಕಾರಿ ನಜೀರ್ ಅಹಮದ್, ನಿರ್ದೇಶಕರಾದ ಟಿಎವಿ ಗುಪ್ತ, ಬೆಂಜಮಿನ್ ಪಾಲ್, ಶೈಕ್ಷಣಿಕ ಆಡಳಿತಾಧಿಕಾರಿ ಲಕ್ಷ್ಮಣಯ್ಯ, ಮುಖ್ಯಶಿಕ್ಷಕರಾದ ತುಕಾರಾಮ್, ಓಂಕಾರಮೂರ್ತಿ ಮುಂತಾದವರಿದ್ದರು.
ವರದಿ : ಗಿರೀಶ್ ಕೆ ಭಟ್


