ಕ್ವೆಟ್ಟಾ: ಪಾಕಿಸ್ತಾನದ ಬಲೂಚಿಸ್ತಾನ್ ಪ್ರಾಂತ್ಯದ ರಾಜಧಾನಿ ಕ್ವೆಟ್ಟಾದಲ್ಲಿ ಭೀಕರ ಭಯೋತ್ಪಾದಕ ದಾಳಿ ನಡೆದಿದೆ. ಕ್ವೆಟ್ಟಾ ಕಂಟೋನ್ಮೆಂಟ್ ರೈಲ್ವೆ ಸ್ಟೇಷನ್ ಸಮೀಪವಿರುವ ಚಮನ್ ಗೇಟ್ ಬಳಿ ಭಾನುವಾರ (ಮೇ 24) 'ಜಾಫರ್ ಎಕ್ಸ್‌ಪ್ರೆಸ್' ರೈಲನ್ನು ಗುರಿಯಾಗಿಸಿಕೊಂಡು ಈ ಕ್ರೂರ ಕೃತ್ಯ ಎಸಗಲಾಗಿದೆ.
ನಿಷೇಧಿತ ಭಯೋತ್ಪಾದಕ ಸಂಘಟನೆ ಬಲೂಚ್ ಲಿಬರೇಶನ್ ಆರ್ಮಿ (BLA) ಗೆ ಸೇರಿದ 'ಮಜೀದ್ ಬ್ರಿಗೇಡ್'ನ ಆತ್ಮಹತ್ಯಾ ಬಾಂಬರ್ ಈ ಸ್ಫೋಟವನ್ನು ನಡೆಸಿದ್ದಾನೆ.
ಅತ್ಯಂತ ಶಕ್ತಿಶಾಲಿಯಾಗಿದ್ದ ಈ ಬಾಂಬ್ ಸ್ಫೋಟದ ತೀವ್ರತೆಗೆ ರೈಲಿನ ಒಂದು ಬೋಗಿ ಸಂಪೂರ್ಣವಾಗಿ ಧ್ವಂಸಗೊಂಡಿದೆ. ಈ ಭೀಕರ ದಾಳಿಯಲ್ಲಿ ಕನಿಷ್ಠ 30 ಜನರು ಸಾವನ್ನಪ್ಪಿದ್ದು, 70ಕ್ಕೂ ಹೆಚ್ಚು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಮೃತರ ಪೈಕಿ ಹೆಚ್ಚಿನವರು ಸೇನಾ ಸಿಬ್ಬಂದಿ ಎಂದು ಮಾಹಿತಿ ಲಭ್ಯವಾಗಿದೆ.
ಸೇನಾ ಸಿಬ್ಬಂದಿಯೇ ಉಗ್ರರ ಟಾರ್ಗೆಟ್!
ಸೇನಾ ಸಿಬ್ಬಂದಿಯನ್ನು ಹೊತ್ತೊಯ್ಯುತ್ತಿದ್ದ ಜಾಫರ್ ಎಕ್ಸ್‌ಪ್ರೆಸ್ ರೈಲು ಚಮನ್ ಗೇಟ್ ಬಳಿ ಬರುತ್ತಿದ್ದಂತೆ, ಟ್ರ್ಯಾಕ್ ಪಕ್ಕದಲ್ಲೇ ಹೊಂಚು ಹಾಕಿ ಕಾಯುತ್ತಿದ್ದ ಆತ್ಮಹತ್ಯಾ ಬಾಂಬರ್ ತನ್ನನ್ನು ತಾನು ಸ್ಫೋಟಿಸಿಕೊಂಡಿದ್ದಾನೆ.
ಈ ಸ್ಫೋಟದ ತೀವ್ರತೆ ಎಷ್ಟಿತ್ತೆಂದರೆ ಸುತ್ತಮುತ್ತಲಿನ ಮನೆಗಳು ಮತ್ತು ವಾಹನಗಳು ಜಖಂಗೊಂಡಿವೆ. ಸ್ಫೋಟದ ಭೀಕರ ಶಬ್ದಕ್ಕೆ ಕ್ವೆಟ್ಟಾ ನಗರವೇ ಒಂದು ಕ್ಷಣ ನಡುಗಿದ್ದು, ಘಟನಾ ಸ್ಥಳದಲ್ಲಿ ದಟ್ಟವಾದ ಹೊಗೆ ಆವರಿಸಿಕೊಂಡಿದ್ದರಿಂದ ಸ್ಥಳೀಯರು ತೀವ್ರ ಆತಂಕಕ್ಕೊಳಗಾಗಿದ್ದರು.
ಹೆಚ್ಚಾಗುವ ಸಾಧ್ಯತೆಯಿದೆ ಸಾವಿನ ಸಂಖ್ಯೆ
ಘಟನೆ ನಡೆದ ತಕ್ಷಣ ಪೊಲೀಸರು ಮತ್ತು ರಕ್ಷಣಾ ಸಿಬ್ಬಂದಿ ಸ್ಥಳಕ್ಕೆ ಧಾವಿಸಿದ್ದಾರೆ. ಸ್ಥಳೀಯರ ನೆರವಿನೊಂದಿಗೆ ಗಾಯಾಳುಗಳನ್ನು ಕ್ವೆಟ್ಟಾದ ಸಮೀಪದ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ. ಗಾಯಗೊಂಡವರಲ್ಲಿ ಹಲವರ ಸ್ಥಿತಿ ಚಿಂತಾಜನಕವಾಗಿದ್ದು, ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆಯಿದೆ ಎಂದು ವೈದ್ಯರು ಆತಂಕ ವ್ಯಕ್ತಪಡಿಸಿದ್ದಾರೆ.
ಸದ್ಯ ಭದ್ರತಾ ಪಡೆಗಳು ಇಡೀ ಪ್ರದೇಶವನ್ನು ತಮ್ಮ ವಶಕ್ಕೆ ಪಡೆದುಕೊಂಡು ಸುತ್ತಮುತ್ತ ತಲಾಷ್ ನಡೆಸ್ತಿದ್ದಾರೆ. ಅಲ್ಲದೆ ಬಲೂಚಿಸ್ತಾನ್ ಪ್ರಾಂತ್ಯದಾದ್ಯಂತ ಹೈ ಅಲರ್ಟ್ ಘೋಷಿಸಲಾಗಿದೆ.
ದಾಳಿಯ ಹೊಣೆ ಹೊತ್ತ ಬಿಎಲ್‌ಎ (BLA)
ಈ ದಾಳಿಯ ಹೊಣೆಯನ್ನು ತಾವೇ ಹೊರುತ್ತಿರುವುದಾಗಿ ಬಿಎಲ್‌ಎ ವಕ್ತಾರ ಜಿಯಾಂಡ್ ಬಲೂಚ್ ಅಧಿಕೃತ ಪ್ರಕಟಣೆಯಲ್ಲಿ ತಿಳಿಸಿದ್ದಾನೆ. ಗರಿಷ್ಠ ಮಟ್ಟದ ಪ್ರಾಣಹಾನಿ ಉಂಟುಮಾಡುವ ಉದ್ದೇಶದಿಂದಲೇ ಮುಂಚಿತವಾಗಿ ಯೋಜಿಸಿ ಈ ಸಮಯವನ್ನು ಆಯ್ದುಕೊಳ್ಳಲಾಗಿದೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.
ಇನ್ನು ಈ ಹೇಡಿತನದ ದಾಳಿಯನ್ನು ಪಾಕಿಸ್ತಾನದ ರೈಲ್ವೆ ಸಚಿವರು ತೀವ್ರವಾಗಿ ಖಂಡಿಸಿದ್ದಾರೆ. ಇಂತಹ ದಾಳಿಗಳು ಭಯೋತ್ಪಾದನೆಯನ್ನು ನಿರ್ಮೂಲನೆ ಮಾಡುವ ದೇಶದ ರಾಷ್ಟ್ರೀಯ ಸಂಕಲ್ಪ ಮತ್ತು ಧೈರ್ಯವನ್ನು ಕುಗ್ಗಿಸಲು ಸಾಧ್ಯವಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಸದ್ಯ ತನಿಖಾ ಸಂಸ್ಥೆಗಳು ಸ್ಫೋಟಕ್ಕೆ ಸಂಬಂಧಿಸಿದ ಸಂಪೂರ್ಣ ಸಾಕ್ಷ್ಯಗಳನ್ನು ಸಂಗ್ರಹಿಸಲು ತೀವ್ರ ಕಾರ್ಯಾಚರಣೆ ಕೈಗೊಂಡಿವೆ.

