ಧಾರವಾಡ : ಬಿಸಿಲಿನ ಬೇಗೆಯಿಂದ ಬಸವಳಿದು ಕೆರೆಗೆ ಈಜಲು ತೆರಳಿದ್ದ ಮೂವರು ಬಾಲಕರು ಮುಳುಗಿ ದುರ್ಮರಣ. ಹೊಂದಿರುವಂತಹ ದಾರುಣ ಘಟನೆ ಧಾರವಾಡ ತಾಲೂಕಿನ ಸಿಂಗನಹಳ್ಳಿ ಗ್ರಾಮದ ಬಳಿ ಇರುವ ಕೆರೆಯಲ್ಲಿ ನಡೆದಿದೆ.
ಮೃತರನ್ನು ಸಿಂಗನಹಳ್ಳಿ ಗ್ರಾಮದ ನಿವಾಸಿಗಳಾದ ಅಬ್ಬಾಸ್ ವಟ್ನಾಳ್ (12), ಅಸ್ಲಂ ವಟ್ನಾಳ್ (10) ಹಾಗೂ ಬೆಳಗಾವಿ ಜಿಲ್ಲೆಯ ಬೈಲಹೊಂಗಲ ಮೂಲದ ಸುಭಾನಿ ಬಾಗೋಜಿಕೊಪ್ಪ (10) ಎಂದು ಗುರುತಿಸಲಾಗಿದೆ.ಗದಗ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ಬೇಸಿಗೆಯ ಕಡು ಬಿಸಿಲಿನ ತಾಪ ತಾಳಲಾರದೆ ಮೂವರು ಅಪ್ರಾಪ್ತ ಬಾಲಕರು ಧಾರವಾಡ ತಾಲೂಕಿನ ಸಿಂಗನಹಳ್ಳಿ ಬಳಿಯ ಕೆರೆಯಲ್ಲಿ ಈಜಲು ಹೋಗಿದ್ದಾರೆ.
ಆದರೆ ಈ ವೇಳೆ ಕೆರೆಯಲ್ಲಿ ಮುಳುಗಿ ಜಲಸಮಾಧಿಯಾಗಿದ್ದಾರೆ. ಮೃತರಲ್ಲಿ ಅಬ್ಬಾಸ್ ಮತ್ತು ಅಸ್ಲಂ ಸಹೋದರರು. ಸದ್ಯ ಮೂವರು ಬಾಲಕರ ಶವವನ್ನು ಅಗ್ನಿಶಾಮಕ ದಳದ ಸಿಬ್ಬಂದಿ ಕೆರೆಯಿಂದ ಹೊರತೆಗೆದಿದ್ದಾರೆ.
ಇನ್ನು ಘಟನಾ ಸ್ಥಳಕ್ಕೆ ಧಾರವಾಡ ಎಸ್ಪಿ ಗುಂಜನ್ ಆರ್ಯ ಭೇಟಿ ನೀಡಿ ಪರಿಶೀಲಿಸಿದರು. ಮೃತ ಬಾಲಕರ ದೇಹಗಳನ್ನು ನೋಡಿದ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದ್ದು, ಇಡೀ ಸಿಂಗನಹಳ್ಳಿ ಗ್ರಾಮದಲ್ಲಿ ಸೂತಕದ ಛಾಯೆ ಆವರಿಸಿದೆ.

