ಬೆಳಗಾವಿ: ದೆವ್ವ, ಭೂತೋಚ್ಛಾಟನೆ ಹಾಗೂ ದೈವದ ಕೋಪದ (Belagavi) ನೆಪದಲ್ಲಿ ಮಹಿಳೆಯರು ಮತ್ತು ಮಕ್ಕಳನ್ನು ದೈಹಿಕ ಹಾಗೂ ಮಾನಸಿಕ ಹಿಂಸೆಗೆ ಒಳಪಡಿಸುವ ದಾರುಣ ಘಟನೆಗಳು ಇತ್ತೀಚಿನ ದಿನಗಳಲ್ಲಿ ಹೆಚ್ಚುತ್ತಲೇ ಇವೆ.
ಜನರ ಮುಗ್ಧತೆ, ಭಯ ಹಾಗೂ ಅಜ್ಞಾನವನ್ನೇ ಬಂಡವಾಳವಾಗಿಸಿಕೊಂಡು ಕೆಲವರು ನಡೆಸುತ್ತಿರುವ ಇಂತಹ ಕೃತ್ಯಗಳು ಸಮಾಜ ತಲೆತಗ್ಗಿಸುವಂತೆ ಮಾಡುತ್ತಿವೆ.
ಇದೀಗ ಬೆಳಗಾವಿ ಜಿಲ್ಲೆಯ ಮಕ್ಕಳಗೇರಿ ಗ್ರಾಮದಲ್ಲಿ ನಡೆದಿದೆ ಎನ್ನಲಾದ ಇಂತಹುದೇ ಒಂದು ಅಮಾನವೀಯ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ.
ಇನ್‌ಸ್ಟಾಗ್ರಾಮ್‌ನ ಖಾತೆಯೊಂದರಲ್ಲಿ ಹಂಚಿಕೊಳ್ಳಲಾಗಿರುವ ಈ ದೃಶ್ಯಗಳಲ್ಲಿ, ಮಹಿಳೆಯೊಬ್ಬರನ್ನು ಕಂಬಕ್ಕೆ ಕಟ್ಟಿಹಾಕಿ ದೈವದ ಹೆಸರಿನಲ್ಲಿ ಕ್ರೂರವಾಗಿ ಮತ್ತು ಹಿಂಸಾತ್ಮಕವಾಗಿ ನಡೆಸಿಕೊಳ್ಳುತ್ತಿರುವುದು ಸ್ಪಷ್ಟವಾಗಿ ಕಾಣಿಸುತ್ತಿದೆ.
ಈ ವಿಡಿಯೋಗಳು ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಹಾಗೂ ಸಾರ್ವಜನಿಕರು ಆಘಾತ ವ್ಯಕ್ತಪಡಿಸಿದ್ದು, ಮಹಿಳೆಯ ಮೇಲಿನ ಈ ಅತಿರೇಕದ ವರ್ತನೆಗೆ ಕಾರಣರಾದವರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಬೇಕು ಎಂದು ಒತ್ತಾಯಿಸುತ್ತಿದ್ದಾರೆ.
ಯಾವುದೇ ವ್ಯಕ್ತಿ ಮಾನಸಿಕ ಅಸ್ವಸ್ಥತೆ ಅಥವಾ ಕೌಟುಂಬಿಕ ಸಮಸ್ಯೆಗಳಿಂದ ಬಳಲುತ್ತಿದ್ದರೆ ಅವರಿಗೆ ಸೂಕ್ತ ವೈದ್ಯಕೀಯ ಚಿಕಿತ್ಸೆ ಕೊಡಿಸುವ ಬದಲು, ಹೀಗೆ ಮೂಢನಂಬಿಕೆಯ ಕೂಪಕ್ಕೆ ತಳ್ಳಿ ದೌರ್ಜನ್ಯ ಎಸಗುವುದು ನಾಗರಿಕ ಸಮಾಜಕ್ಕೆ ದೊಡ್ಡ ಕಂಟಕವಾಗಿದೆ ಎಂದು ಪ್ರಜ್ಞಾವಂತ ನಾಗರಿಕರು ಕಳವಳ ವ್ಯಕ್ತಪಡಿಸಿದ್ದಾರೆ.
ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆ ತಕ್ಷಣವೇ ಜಾಗೃತಗೊಂಡು ಈ ಪ್ರಕರಣದ ಸತ್ಯಾಸತ್ಯತೆಯನ್ನು ಪರಿಶೀಲಿಸಬೇಕು ಮತ್ತು ಧರ್ಮ ಹಾಗೂ ದೈವದ ಹೆಸರಿನಲ್ಲಿ ನಡೆಯುವ ಇಂತಹ ಶೋಷಣೆಗಳಿಗೆ ಶಾಶ್ವತವಾಗಿ ಕಡಿವಾಣ ಹಾಕಬೇಕು ಎಂಬ ಆಗ್ರಹ ಕೇಳಿಬಂದಿದೆ.

