ರಾಯಚೂರು: ರಾಜ್ಯದಲ್ಲಿ ಮತ್ತೊಂದು ಪೈಶಾಚಿಕ ಕೃತ್ಯ ನಡೆದಿದ್ದು, ರಾಯಚೂರು ಜಿಲ್ಲೆಯ ಸಿಂಧನೂರು ನಗರದಲ್ಲಿ ಕಾಮುಕನೊಬ್ಬ ಇಬ್ಬರು ಅಪ್ರಾಪ್ತ ಅಕ್ಕ-ತಂಗಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ.
ಕೂಲಿ ಕಾರ್ಮಿಕರ ಶೆಡ್ ಗೆ ನುಗ್ಗಿದ ಕಿರಾತಕ ಇಬ್ಬರು ಅಪ್ರಾಪ್ತ ಅಕ್ಕ-ತಂಗಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವ ಘಟನೆ ಸಿಂಧನೂರು ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಸ್ಥಳೀಯ ಫ್ಯಾಕ್ಟರಿಯೊಂದರಲ್ಲಿ ಕೆಲಸ ಮಾಡುತ್ತಿದ್ದ 30 ವರ್ಷದ ಬಾಬಾ ಎಂಬಾತನೇ ಬಂಧಿತ ಆರೋಪಿ. ಈತ ಸಂತ್ರಸ್ತ ಬಾಲಕಿಯರ ಕುಟುಂಬಕ್ಕೆ ಪರಿಚಯಸ್ಥನಾಗಿದ್ದ ಎಂದು ತಿಳಿದುಬಂದಿದೆ.
ಘಟನೆಯ ವಿವರ
ಸಂತ್ರಸ್ತ ಬಾಲಕಿಯರು 8 ಮತ್ತು 9 ವರ್ಷದವರಾಗಿದ್ದು, ಸ್ಥಳೀಯ ಶಾಲೆಯಲ್ಲಿ 2 ಮತ್ತು 3ನೇ ತರಗತಿ ವ್ಯಾಸಂಗ ಮಾಡುತ್ತಿದ್ದರು.
ಬಡತನದ ಹಿನ್ನೆಲೆಯಲ್ಲಿ ಬಾಲಕಿಯರ ಪೋಷಕರು ಪ್ರತಿದಿನ ಕೂಲಿ ಕೆಲಸಕ್ಕೆ ಹೋಗುತ್ತಿದ್ದರು.
ಎಂದಿನಂತೆ ಪೋಷಕರು ಕೆಲಸಕ್ಕೆ ತೆರಳಿದ್ದ ಸಂದರ್ಭವನ್ನು ಬಳಸಿಕೊಂಡ ಆರೋಪಿ ಬಾಬಾ, ಬಾಲಕಿಯರು ವಾಸವಿದ್ದ ಶೆಡ್ ಗೆ ನುಗ್ಗಿ ಈ ಘೋರ ಕೃತ್ಯ ಎಸಗಿದ್ದಾನೆ.


