ರಾಂಚಿ: ವಿವಾಹದ ಬಳಿಕ ಮಹಿಳೆ ಉನ್ನತ ಶಿಕ್ಷಣ ಪಡೆಯುವುದು ಆಕೆಯ ವೈಯಕ್ತಿಕ ಹಕ್ಕಾಗಿದ್ದು, ಅದು ಪತಿ ನೀಡುವ ಯಾವುದೇ ವಿಶೇಷ ಸವಲತ್ತು ಅಥವಾ ಔದಾರ್ಯವಲ್ಲ ಎಂದು ಜಾರ್ಖಂಡ್ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ.
ಅದೇ ರೀತಿ ಮಹಿಳೆ ತನ್ನ ಸ್ವಂತ ಸಾಮರ್ಥ್ಯದ ಮೇಲೆ ಉದ್ಯೋಗವನ್ನು ಆರಿಸಿಕೊಂಡರೆ, ಅದಕ್ಕೆ ಸಮ್ಮತಿಸುವುದು ಗಂಡ ಮಾಡುವ ಉಪಕಾರವೇನಲ್ಲ.
ಶಿಕ್ಷಣ ಅಥವಾ ವೃತ್ತಿಜೀವನವನ್ನು ಮುಂದುವರಿಸಲು ಬಯಸುವ ಪತ್ನಿಯನ್ನು 'ಅತಿಯಾದ ಮಹತ್ವಾಕಾಂಕ್ಷಿ' ಎಂದು ಹಣೆಪಟ್ಟಿ ಕಟ್ಟುವುದು ಲಿಂಗ ತಾರತಮ್ಯದ ದೃಷ್ಟಿಕೋನ ಎಂದಿರುವ ನ್ಯಾಯಾಲಯ, ಪತಿಯ ಕ್ರೌರ್ಯವನ್ನು ಪ್ರಶ್ನಿಸಿ ಶಿಕ್ಷಕಿಯೊಬ್ಬರು ಸಲ್ಲಿಸಿದ್ದ ಮೇಲ್ಮನವಿಯನ್ನು ಪುರಸ್ಕರಿಸಿ ವಿಚ್ಛೇದನ ಮಂಜೂರು ಮಾಡಿದೆ.
ಪತಿಯ ನಿರುದ್ಯೋಗ ಮತ್ತು ವರದಕ್ಷಿಣೆ ಕಿರುಕುಳ
ಪ್ರಕರಣದ ವಿವರಗಳ ಪ್ರಕಾರ, 2004ರಲ್ಲಿ ಜಮ್ಶೆಡ್‌ಪುರದಲ್ಲಿ ಹಿಂದೂ ಸಂಪ್ರದಾಯದಂತೆ ವಿವಾಹವಾಗಿದ್ದ ದಂಪತಿಗೆ ಹೆಣ್ಣು ಮಗುವೊಂದು ಜನಿಸಿತ್ತು. ಮದುವೆಯ ನಂತರ ಪತಿ ಯಾವುದೇ ಉದ್ಯೋಗ ಮಾಡದೆ, ಪತ್ನಿಯ ದುಡಿಮೆಯ ಮೇಲೆಯೇ ಸಂಪೂರ್ಣ ಅವಲಂಬಿತನಾಗಿದ್ದ. ತನಗೆ ದೆಹಲಿಯಲ್ಲಿ ಕೆಲಸ ದೊರೆತಿದೆ ಎಂದು ಸುಳ್ಳು ನಂಬಿಸಿ ಆಕೆಯ ಶಿಕ್ಷಕಿ ಕೆಲಸವನ್ನು ಬಿಡಿಸಿ ದೆಹಲಿಗೆ ಕರೆದೊಯ್ದಿದ್ದ ಪತಿ, ಕೆಲವೇ ದಿನಗಳಲ್ಲಿ ತಾನು ರಾಜೀನಾಮೆ ನೀಡಿ ಆಕೆಯನ್ನು ಮತ್ತು ಮಗುವನ್ನು ಅಲ್ಲಿಯೇ ಅಸಹಾಯಕ ಸ್ಥಿತಿಯಲ್ಲಿ ಬಿಟ್ಟು ತೆರಳಿದ್ದ. ಬಳಿಕ ವಿದೇಶಕ್ಕೆ ಹೋಗುವ ಉದ್ದೇಶದಿಂದ ಪತ್ನಿ ಮತ್ತು ಆಕೆಯ ಪೋಷಕರಿಂದ ₹5 ಲಕ್ಷ ವರದಕ್ಷಿಣೆ ನೀಡುವಂತೆ ಪೀಡಿಸಿ, ದೈಹಿಕ ಹಾಗೂ ಮಾನಸಿಕ ಹಿಂಸೆ ನೀಡಲಾರಂಭಿಸಿದ್ದ.
ಕೌಟುಂಬಿಕ ನ್ಯಾಯಾಲಯದ ಆದೇಶ ತಿರಸ್ಕರಿಸಿದ ಹೈಕೋರ್ಟ್
ಪತಿಯ ನಿರಂತರ ಕ್ರೌರ್ಯವನ್ನು ತಾಳಲಾರದೆ ಜಮ್ಶೆಡ್‌ಪುರಕ್ಕೆ ಹಿಂದಿರುಗಿದ ಮಹಿಳೆ, ಖಾಸಗಿ ಶಾಲೆಯೊಂದರಲ್ಲಿ ಶಿಕ್ಷಕಿಯಾಗಿ ಸೇರಿ ಕೌಟುಂಬಿಕ ನ್ಯಾಯಾಲಯದಲ್ಲಿ ವಿಚ್ಛೇದನ ಕೋರಿದ್ದರು.
ಆದರೆ, ಪತ್ನಿ ಉನ್ನತ ವ್ಯಾಸಂಗ ಮುಂದುವರಿಸಲು ಪತಿ ಹಾಸ್ಟೆಲ್‌ನಲ್ಲಿ ಉಳಿಯಲು ಅವಕಾಶ ನೀಡಿದ್ದಾನೆ ಮತ್ತು ಉದ್ಯೋಗ ಮಾಡಲು ಸಮ್ಮತಿಸಿದ್ದಾನೆ, ಇದು ಆತನ ಉದಾರ ಸ್ವಭಾವವನ್ನು ತೋರಿಸುತ್ತದೆ ಎಂದು ಕೌಟುಂಬಿಕ ನ್ಯಾಯಾಲಯವು ಅರ್ಜಿಯನ್ನು ವಜಾಗೊಳಿಸಿತ್ತು.
ಅಲ್ಲದೆ, ಮಹಿಳೆ ತನ್ನ ವೃತ್ತಿಜೀವನದ ಬಗ್ಗೆ ಅತಿಯಾದ ಮಹತ್ವಾಕಾಂಕ್ಷೆ ಹೊಂದಿ ಈ ಸುಳ್ಳು ಕಥೆ ಕಟ್ಟಿದ್ದಾರೆ ಎಂದೂ ಅಭಿಪ್ರಾಯಪಟ್ಟಿತ್ತು.
ಈ ಆದೇಶವನ್ನು ತಳ್ಳಿಹಾಕಿದ ಹೈಕೋರ್ಟ್ ವಿಭಾಗೀಯ ಪೀಠವು, ಕೌಟುಂಬಿಕ ನ್ಯಾಯಾಲಯದ ಇಂತಹ ಲಿಂಗ ತಾರತಮ್ಯದ ಮತ್ತು ಸಾಂಪ್ರದಾಯಿಕ ದೃಷ್ಟಿಕೋನವನ್ನು ತೀವ್ರವಾಗಿ ಆಕ್ಷೇಪಿಸಿತು.
ವೈವಾಹಿಕ ಜೀವನದಲ್ಲಿ ಸಮಾನತೆಯ ಮಹತ್ವ
ಮುಖ್ಯ ನ್ಯಾಯಮೂರ್ತಿಗಳು ಹಾಗೂ ನ್ಯಾಯಮೂರ್ತಿ ಮನೋಜ್ ಪ್ರಸಾದ್ ಅವರಿದ್ದ ವಿಭಾಗೀಯ ಪೀಠವು, ದಾಂಪತ್ಯ ಜೀವನದಲ್ಲಿ ಗಂಡ ಮತ್ತು ಹೆಂಡತಿ ಸಮಾನ ಪಾಲುದಾರರು ಎಂದು ಸ್ಪಷ್ಟಪಡಿಸಿತು.
ಗಂಡ-ಹೆಂಡತಿಯ ಸಂಬಂಧವು ಮೇಲು-ಕೀಳಿನದ್ದಲ್ಲ ಅಥವಾ ಒಬ್ಬರು ಇನ್ನೊಬ್ಬರ ಮೇಲೆ ಪ್ರಾಬಲ್ಯ ಮೆರೆಯುವಂತಿಲ್ಲ ಎಂದ ಪೀಠ, ಪತಿ ಉನ್ನತ ಶಿಕ್ಷಣ ಪಡೆದು ವೃತ್ತಿಯಲ್ಲಿ ಬೆಳೆಯಲು ಬಯಸಿದರೆ ಅದನ್ನು ಸರಿ ಎಂದು ಪರಿಗಣಿಸಿ, ಪತ್ನಿ ಅದನ್ನೇ ಮಾಡಿದಾಗ ಆಕೆಯನ್ನು ತಪ್ಪಿತಸ್ಥಳಂತೆ ನೋಡುವುದು ಅಥವಾ ಕುಟುಂಬ ವಿರೋಧಿ ಎಂದು ಬಿಂಬಿಸುವುದು ಅಸಮಾನತೆಯ ಧೋರಣೆ ಎಂದು ಅಭಿಪ್ರಾಯಪಟ್ಟಿತು.


