ಬೆಂಗಳೂರು: ಕರ್ನಾಟಕದಲ್ಲಿ ರಾಜ್ಯ ಸರ್ಕಾರ ಮತ್ತು ರಾಜಭವನದ ನಡುವಿನ ವಿಧೇಯಕಗಳ ಅನುಮೋದನೆ ಜಟಾಪಟಿ ಮುಂದುವರಿದಿದೆ.
ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ವಿವರಣೆ ಕೇಳಿ ವಾಪಸ್ ಕಳುಹಿಸಿದ್ದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ವಿಶ್ವವಿದ್ಯಾಲಯ (ತಿದ್ದುಪಡಿ) ಮಸೂದೆ ಸೇರಿದಂತೆ ಒಟ್ಟು ಆರು ಪ್ರಮುಖ ತಿದ್ದುಪಡಿ ವಿಧೇಯಕಗಳನ್ನು ರಾಜ್ಯ ಸರ್ಕಾರ ಸ್ಪಷ್ಟನೆಯೊಂದಿಗೆ ಮತ್ತೆ ರಾಜಭವನಕ್ಕೆ ರವಾನಿಸಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರ ವಿವಿಧ 6 ಪ್ರಮುಖ ಮಸೂದೆಗಳನ್ನು ಮತ್ತೊಮ್ಮೆ ರಾಜ್ಯಪಾಲರಿಗೆ ಕಳುಹಿಸಿದೆ. ಈ ಆರು ಪ್ರಮುಖ ಮಸೂದೆಗಳ ಪೈಕಿ ಮೂರು ಮಸೂದೆಗಳಿಗೆ ಒಂದು ವರ್ಷದಿಂದ ರಾಜ್ಯಪಾಲರ ಒಪ್ಪಿಗೆ ಬಾಕಿ ಉಳಿದಿವೆ.
ಹೀಗಾಗಿ ಸಕಲ ಸ್ಪಷ್ಟನೆಯೊಂದಿಗೆ ಮತ್ತೊಮ್ಮೆ ಮಸೂದೆಗಳನ್ನು ರಾಜಭವನಕ್ಕೆ ರವಾನಿಸಿರುವ ರಾಜ್ಯ ಸರ್ಕಾರ ಈ ಬಾರಿಯಾದರೂ ರಾಜ್ಯಪಾಲರು ಅನುಮೋದನೆ ನೀಡಬಹುದು ಎನ್ನುವ ನಿರೀಕ್ಷೆಯಲ್ಲಿದೆ.
ಆರು ಮಸೂದೆಗಳು ಯಾವುವು?
ಕರ್ನಾಟಕ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ವಿಶ್ವವಿದ್ಯಾಲಯ ತಿದ್ದುಪಡಿ ವಿಧೇಯಕ -2024, ಮೈಸೂರು ಅಭಿವೃದ್ಧಿ ಪ್ರಾಧಿಕಾರ ವಿಧೇಯಕ -2024, ಕರ್ನಾಟಕ ಲೋಕಸೇವಾ ಆಯೋಗ ಕಾರ್ಯನಿರ್ವಹಣೆ ಮತ್ತು ಇತರ ಪ್ರಕಾರ್ಯಗಳು ತಿದ್ದುಪಡಿ ವಿಧೇಯಕ -2024, ಗದಗ-ಬೆಟಗೇರಿ ವ್ಯಾಪಾರ, ಸಾಂಸ್ಕೃತಿಕ ಮತ್ತು ಪ್ರದರ್ಶನ ಪ್ರಾಧಿಕಾರ ವಿಧೇಯಕ -2024, ಕರ್ನಾಟಕ ಸೌಹಾರ್ದ ಸಹಕಾರಿ ತಿದ್ದುಪಡಿ ವಿಧೇಯಕ -2024 ಹಾಗೂ ಕರ್ನಾಟಕ ಸಹಕಾರ ಸಂಘಗಳ ತಿದ್ದುಪಡಿ ವಿಧೇಯಕ -2024ಕ್ಕೆ ಅನುಮೋದನೆ ನೀಡುವಂತೆ ರಾಜ್ಯ ಸರ್ಕಾರ ರಾಜ್ಯಪಾಲರಿಗೆ ಸಕಲ ಸ್ಪಷ್ಟನೆಯೊಂದಿಗೆ ಮಸೂದೆಗಳನ್ನು ಸಲ್ಲಿಕೆ ಮಾಡಿದೆ.