ಸೇಡಂ: ಸಿಮೆಂಟ್ ಕಾರ್ಖಾನೆಗಳಲ್ಲಿ ಸರಣಿ ಕಾರ್ಮಿಕರ ಸಾವುಗಳಾಗುತ್ತಿದ್ದರೂ ಸಹ ಕಾರ್ಖಾನೆಗಳ ವಿರುದ್ಧ ಮೃಧು ಧೋರಣೆ ಅನುಸರಿಸುತ್ತಿರುವ ಡಿಸಿ ವರ್ಗಾಯಿಸಬೇಕು ಮತ್ತು ಸಿಮೆಂಟ್ ಕಾರ್ಖಾನೆ ಬಂದ್ ಮಾಡಬೇಕು ಎಂದು ಸಾಮಾಜಿಕ ಕಾರ್ಯಕರ್ತ ಹಾಗೂ ಸೇಡಂ ಜನಹಿತ ರಕ್ಷಣಾ ಸಮಿತಿಯ ಶಿವಕುಮಾರ ಅಪ್ಪಾಜಿ ಒತ್ತಾಯಿಸಿದ್ದಾರೆ.
ಸೇಡಂ ತಾಲೂಕಿನ ಬೆನಕನಹಳ್ಳಿಯ ಬಂಗುರ ಒಡೆತನದ ಶ್ರೀಸಿಮೆಂಟ್ ಕಾರ್ಖಾನೆಯಲ್ಲಿ ಕಳೆದ ವರ್ಷ ಜುಲೈ ತಿಂಗಳಲ್ಲಿ 4 ಜನ ಕಾರ್ಮಿಕರು ಮೃತಪಟ್ಟಿದ್ದರು. ಆಗಸ್ಟ 2018 ರಲ್ಲಿ ಕ್ರೇನ್ ಕುಸಿದು 6 ಜನ ಕಾರ್ಮಿಕರು ದಾರುಣ ಸಾವು ಕಂಡಿದ್ದರು. ಈಗ ಮತ್ತೋರ್ವ ಕಾರ್ಮಿಕ ಸಾವನ್ನಪ್ಪಿದ್ದಾನೆ. ಆತನ ಶವವನ್ನು ಅಮಾನವೀಯವಾಗಿ ಬಳಸಿಕೊಳ್ಳಲಾಗಿದೆ. ಸತ್ತ ಕಾರ್ಮಿಕನ ಶವವನ್ನು ನಾಯಿ ಎಳೆದುಕೊಂಡು ಹೋದಂತೆ ಎಳೆದುಕೊಂಡು ಹೋಗಲಾಗಿದೆ. ಈ ಘಟನೆ ಇಡೀ ಮಾನವ ಕುಲ ತಲೆತಗ್ಗಿಸುವಂತದ್ದಾಗಿದೆ. ಇಷ್ಟಾದರೂ ಸಹ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ, ಸೇಡಂ ಶಾಸಕರು ಹಾಗೂ ಸಚಿವ ಡಾ. ಶರಣಪ್ರಕಾಶ ಪಾಟೀಲ ತುಟಿಕ್ ಪಿಟಿಕ್ ಅಂದಿಲ್ಲ. ಜಿಲ್ಲಾಧಿಕಾರಿಗಳು ತಮ್ಮ ಕರ್ತವ್ಯ ಮರೆತು ಕೂತಿದ್ದಾರೆ.
ಕೆಲ ದಿನಗಳ ಹಿಂದೆ ಕಾರ್ಮಿಕರ ಸಾವಾದಾಗ ಪತ್ರಕರ್ತರು ಪ್ರಶ್ನಿಸಿದ್ದಾರೆಂಬ ಕಾರಣಕ್ಕೆ ಕಾರ್ಖಾನೆಗೆ ನಾಮಕೆವಾಸ್ತೆ ಭೇಟಿ ಕೊಟ್ಟಿದ್ದರು. ಆದರೆ ಯಾವುದೇ ಕ್ರಮ ಜರುಗಿಸಿಲ್ಲ. ಸಂವಿಧಾನಾತ್ಮಕವಾಗಿ ಜನರ ಸೇವೆ ಮಾಡಬೇಕಾದ ಅಧಿಕಾರಿಗಳು ಕಾರ್ಮಿಕರ ಸೇವಕರಂತೆ ವರ್ತಿಸುತ್ತಿದ್ದಾರೆ. ಈ ಕುರಿತು ಪರಿಶೀಲಿಸಬೇಕಾದ ಜಿಲ್ಲಾಢಳಿತ ಇದ್ದೂ ಸತ್ತಂತಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕೆಲ ಕಾರ್ಮಿಕರು ಹೃದಯಾಘಾತದಿಂದ ಸಾವನ್ನಪ್ಪಿದರೆ ಬಹುತೇಕರು ಕಾರ್ಖಾನೆಯಲ್ಲಿನ ಭದ್ರತಾ ಲೋಪದಿಂದಲೇ ಸಾವನ್ನಪ್ಪಿದ್ದಾರೆ. ಇದಲ್ಲದೆ ಅನೇಕ ಕಾರ್ಮಿಕರು ದುರ್ಘಟನೆಯಲ್ಲಿ ಜೀವ ಕಳೆದುಕೊಂಡಿದ್ದಾರೆ ಅಂತವರ ಶವಗಳನ್ನು ಗುಪ್ತವಾಗಿ ಅವರ ರಾಜ್ಯಗಳಿಗೆ ರವಾನಿಸಲಾಗಿದೆ ಎಂಬ ಆರೋಪಗಳಿವೆ.
ಸೇಡಂ ಸುತ್ತಲೂ ಇರುವ ವಾಸವದತ್ತಾ, ಶ್ರೀಸಿಮೆಂಟ್, ಅಲ್ಟ್ರಾಟೆಕ್ ಸಿಮೆಂಟ್ ಕಾರ್ಖಾನೆಗಳು ಮಿತಿ ಮೀರಿ ಬ್ಲಾಸ್ಟಿಂಗ್ ನಡೆಸುತ್ತಿವೆ. ಜನರ ಜೀವಕ್ಕೆ ಕುತ್ತು ತರುವ ಮಟ್ಟಿಗಿನ ಮಾಲಿನ್ಯ ಉಂಟು ಮಾಡುತ್ತಿವೆ ಆದರೂ ಸಹ ಮಾಲಿನ್ಯ ನಿಯಂತ್ರಣ ಮಂಡಳಿ ಕ್ರಮ ಕೈಗೊಳ್ಳುತ್ತಿಲ್ಲ. ಇದೆಲ್ಲವೂ ಅಧಿಕಾರಿಗಳ ನಿರ್ಲಕ್ಷ್ಯ ದಿಂದಲೇ ಆಗಿದೆ. ಕೂಡಲೇ ಡಿಸಿ ವರ್ಗಾವಣೆ ಮಾಡಿ ಸಿಮೆಂಟ್ ಕಾರ್ಖಾನೆಗಳ ವಿರುದ್ಧ ಕ್ರಮ ಕೈಗೊಳ್ಳಬೇಕು. ಭದ್ರತಾ ಲೋಪ ಸರಿಪಡಿಸುವವರೆಗೆ ಕಾರ್ಖಾನೆ ಬಂದ್ ಮಾಡಬೇಕು ಎಂದು ಆಗ್ರಹಿಸಿದ್ದಾರೆ.
ವರದಿ : ವೆಂಕಟಪ್ಪ ಕೆ ಸುಗ್ಗಾಲ್