ಸಿರುಗುಪ್ಪ : -ನಗರದ ಸಿ.ಡಿ.ಪಿ.ಓ ಕಛೇರಿಯ ಸಭಾಂಗಣದಲ್ಲಿ ತಾಲೂಕು ಆಡಳಿತ, ತಾಲೂಕು ಪಂಚಾಯಿತಿ, ನಗರಸಭೆ, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಗಳ ಸಹಯೋಗದಲ್ಲಿ ಆದಿಕವಿ ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿ ಆಚರಣೆಯ ಪೂರ್ವಭಾವಿ ಸಭೆ ನಡೆಯಿತು.
ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ತಾಲೂಕಾಧ್ಯಕ್ಷ, ತಹಶೀಲ್ದಾರ್ ಹೆಚ್.ವಿಶ್ವನಾಥ ಅವರು ಮಾತನಾಡಿ ಪ್ರತಿವರ್ಷವೂ ಜಯಂತಿಯನ್ನು ಅದ್ದೂರಿಯಾಗಿ ಆಚರಿಸುತ್ತಾ ಬಂದಿದ್ದು, ಮುಖಂಡರು ಇನ್ನು ಹೆಚ್ಚಿನ ಸಲಹೆಗಳನ್ನು ನೀಡಿದಲ್ಲಿ ತಾಲೂಕು ಆಡಳಿತದಿಂದ ಅಗತ್ಯವಿರುವ ಸಕಲ ಸಿದ್ದತೆಗಳನ್ನು ಮಾಡಿಕೊಳ್ಳಲಾಗುವುದೆಂದು ತಿಳಿಸಿದರು.
ವಾಲ್ಮೀಕಿ ವಿದ್ಯಾಭಿವೃದ್ದಿ ಟ್ರಸ್ಟಿನ ಅಧ್ಯಕ್ಷ ಬಿ.ಎಮ್.ಸತೀಶ ಅವರು ಮಾತನಾಡಿ ಕೆಲವು ದಿನಗಳ ಹಿಂದೆಯಷ್ಟೇ ಮಹಾಸಭಾದ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿದ್ದು, ಹೆಚ್ಚಿನ ಜನಸಂಖ್ಯೆ ಸೇರುವ ಸಾಧ್ಯತೆಯಿದೆ.ಜಯಂತಿಯಲ್ಲಿ ಸಮಾಜದ ಇನ್ನಿತರ ಮಹಾತ್ಮರ ಸ್ತಬ್ದ ಚಿತ್ರಗಳನ್ನು ಪ್ರದರ್ಶಿಸಬೇಕೆಂದರು.ಅಖಿಲ ಕರ್ನಾಟಕ ವಾಲ್ಮೀಕಿ ನಾಯಕ ಮಹಾಸಭಾ ತಾಲೂಕಾಧ್ಯಕ್ಷ ಟಿ.ನರಸಿಂಹ ನಾಯಕ ಮಾತನಾಡಿ ಇದೇ ಅಕ್ಟೋಬರ್ 17ರಂದು ನಡೆಯುವ ಜಯಂತಿಯಲ್ಲಿ ಎಲ್ಲಾ ಗ್ರಾಮಗಳಿಂದ ಸಮಾಜದ ಬಂದುಗಳು ಸೇರಬೇಕು.
ಆಯಾ ಗ್ರಾಮಗಳಲ್ಲಿ ಆಚರಿಸಲು ಈ ತಿಂಗಳ ಪೂರ್ತಿವರಗೂ ಸಮಯವಿರುತ್ತದೆ. ಆದ್ದರಿಂದ ಹೆಚ್ಚಿನ ಜನಸಂಖ್ಯೆಯಲ್ಲಿ ಜನ ಸೇರಿದಾಗ ಮಾತ್ರ ಜಯಂತಿಯು ಅರ್ಥಪೂರ್ಣವಾಗಿರುತ್ತದೆಂದರು.ಸಭೆಯಲ್ಲಿ ಇನ್ನುಳಿದ ಮುಖಂಡರು ಮಾತನಾಡಿ ಆಯಾ ಗ್ರಾಮ ಮಟ್ಟದಲ್ಲಿ ಆಚರಿಸುವ ಜಯಂತಿಗೆ ಗ್ರಾಮ ಪಂಚಾಯಿತಿ ಕಾರ್ಯಾಲಯದಿಂದ ಅನುದಾನ ನೀಡಬೇಕು.
ನಗರದಲ್ಲಿರುವ ಶ್ರೀ ವಾಲ್ಮೀಕಿ ವೃತ್ತದ ಸುತ್ತಲೂ ನಿತ್ಯ ಸ್ವಚ್ಛತೆ ಕಾಪಾಡಬೇಕೆಂಬ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು.
ಇದೇ ವೇಳೆ ನಗರಸಭೆ ಅಧ್ಯಕ್ಷೆ ರೇಣುಕಮ್ಮ ವೆಂಕಟೇಶ್, ತಾಲೂಕು ಮಟ್ಟದ ಅಧಿಕಾರಿಗಳು, ಅಖಿಲ ಕರ್ನಾಟಕ ವಾಲ್ಮೀಕಿ ನಾಯಕ ಮಹಾಸಭಾದ ನೂತನ ಪದಾಧಿಕಾರಿಗಳು, ಸಮಾಜದ ಮುಖಂಡರು ಇದ್ದರು.
ವರದಿ : ಶ್ರೀನಿವಾಸ ನಾಯ್ಕ