ತುರುವೇಕೆರೆ : ತಾಲ್ಲೂಕಿನ ಸಾಹಿತಿ ಹಡವನಹಳ್ಳಿ ವೀರಣ್ಣಗೌಡರು ಬರೆದಿರುವ ’ಉರಿವ ದೀಪದ ಕೆಳಗೆ’ ಕೃತಿಗೆ ವಿಚಾರವಾದಿ ಡಾ.ಹೆಚ್.ಎನ್.ನರಸಿಂಹಯ್ಯ ಹೆಸರಿನ ರಾಜ್ಯ ಮಟ್ಟದ ಪುಸ್ತಕ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ.
ಭಾನುವಾರ ಬೆಂಗಳೂರಿನಲ್ಲಿ ನಡೆದ ಸಮಾರಂಭದಲ್ಲಿ ಜನಮನ ಸೇವಾ ಚಾರಿಟಬಲ್ ಟ್ರಸ್ಟ್ ವತಿಯಿಂದ ಈ ಪ್ರಶಸ್ತಿ ಪ್ರಧಾನ ಮಾಡಲಾಗಿದೆ. ಎಲೆರಾಂಪುರ ಮಠದ ಪೀಠಾಧ್ಯಕ್ಷರಾದ ಶ್ರೀ ಡಾ.ಹನುಮಂತನಾಥ ಸ್ವಾಮೀಜಿ, ವಚನ ಜ್ಯೋತಿ ಬಳಗದ ಅಧ್ಯಕ್ಷರಾದ ಎಸ್.ಪಿನಾಕಪಾಣಿ, ಟ್ರಸ್ಟ್ನ ಅಧ್ಯಕ್ಷರಾದ ಡಿ.ಟಿ.ಗೋವಿಂದರಾಜು, ಲೇಖಕ ಮಂಜುನಾಥ್ ದಂಡಿನಶಿವರ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದು, ವೀರಣ್ಣಗೌಡರಿಗೆ ಶುಭ ಕೋರಿದರು.
“ಉರಿವ ದೀಪದ ಕೆಳಗೆ” ಕಥಾ ಸಂಕಲನವು ವೀರಣ್ಣಗೌಡರ ಹತ್ತನೇ ಕೃತಿಯಾಗಿದ್ದು, ಈ ವರ್ಷ ತುಮಕೂರಿನಲ್ಲಿ ಬಿಡುಗಡೆಯಾಗಿತ್ತು. ಈ ಕೃತಿಯಲ್ಲಿ ಹತ್ತು ವಿಭಿನ್ನವಾದ ಕಥೆಗಳನ್ನು ಲೇಖಕರು ಸೊಗಸಾಗಿ ಕಟ್ಟಿಕೊಟ್ಟಿದ್ದಾರೆ. ಗ್ರಾಮೀಣ ಸೊಗಡಿನ ಭಾಷೆಯಲ್ಲಿ ಮೂಡಿ ಬಂದಿರುವ ಈ ಕಥೆಗಳನ್ನು ಪ್ರಸಿದ್ದ ಲೇಖಕರುಗಳೂ ಸಹ ಓದಿ ಮೆಚ್ಚಿದ್ದನ್ನು ಇಲ್ಲಿ ಸ್ಮರಿಸಬಹುದು.
ವರದಿ : ಗಿರೀಶ್ ಕೆ ಭಟ್




