ಬಾಗಲಕೋಟೆ : ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನ ಸಾವಳಗಿ ಗ್ರಾಮದ ಬಳಿ ಮನುಕುಲವೇ ತಲೆತಗ್ಗಿಸುವಂತಹ ಘಟನೆ ನಡೆದಿದೆ.
ಹೊಸ ಕಾರು ಖರೀದಿಸಿ ದೇವಸ್ಥಾನದಲ್ಲಿ ಪೂಜೆ ಮುಗಿಸಿ ಸಂಭ್ರಮದಿಂದ ಮನೆಗೆ ಮರಳುತ್ತಿದ್ದ ಯುವಕನನ್ನು ದುಷ್ಕರ್ಮಿಗಳು ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾರೆ.
ಅಷ್ಟೇ ಅಲ್ಲದೆ, ಕಾರಿನ ಸಮೇತ ಯುವಕನನ್ನು ಸುಟ್ಟು ಹಾಕಿದ ಘಟನೆ ಜಿಲ್ಲೆಯ ಜಮಖಂಡಿ ತಾಲೂಕಿನ ಸಾವಳಗಿ ಗ್ರಾಮದಲ್ಲಿ ನಡೆದಿದೆ.
ಸೋಮಲಿಂಗಪ್ಪ ಪಡಸಲಗಿ (36) ಕೊಲೆಯಾದವರು. ಪ್ರಕರಣಕ್ಕೆ ಸಂಬಂಧಪಟ್ಟಂತೆ ಕೊಲೆಗೀಡಾದ ವ್ಯಕ್ತಿಯ ಸಂಬಂಧಿ ಸದಾಶಿವ ಪಡಸಲಗಿ, ರವಿ ಪಾಟೀಲ್ ಹಾಗೂ ನವೀನ್ ಸೇರಿದಂತೆ ಐವರು ಆರೋಪಿಗಳನ್ನು ಬಂಧಿಸಿ ವಿಚಾರಣೆ ನಡೆಸುತ್ತಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಹೊಸ ಕಾರು ಖರೀದಿಸಿದ್ದ ಸೋಮಲಿಂಗಪ್ಪ ಮನೆ ದೇವರ ಪೂಜೆ ಮಾಡಿಕೊಂಡು ಬಸವ ಜಯಂತಿಯಂದು ಸಂಜೆ 7:30ರ ಸುಮಾರಿಗೆ ಗ್ರಾಮದತ್ತ ಬರುತ್ತಿದ್ದರು.
ಇವರು ಬರುವುದನ್ನೇ ಕಾದು ಕುಳಿತಿದ್ದ ಸದಾಶಿವ ಪಡಸಲಗಿ ಹಾಗೂ ಸಹಚರರು, ಕಾರಿಗೆ ಅಡ್ಡಲಾಗಿ ನಿಂತು ಗಲಾಟೆ ಮಾಡಿದ್ದಾರೆ. ಸೋಮಲಿಂಗಪ್ಪ ಕಾರಿನಿಂದ ಇಳಿದು ಬರುತ್ತಿದ್ದಂತೆ ಸದಾಶಿವ ಹಾಗೂ ಆತನ ಸಹಚರರು ಚಾಕುವಿನಿಂದ ಇರಿದಿದ್ದಾರೆ.
ಹೊಟ್ಟೆ, ಎದೆ ಹಾಗೂ ಕುತ್ತಿಗೆಗೆ ಚಾಕುವಿನಿಂದ ಇರಿದ ಕಾರಣ ಸೋಮಲಿಂಗಪ್ಪ ಕಾರಿನ ಪಕ್ಕದಲ್ಲೇ ಕುಸಿದು ಬಿದ್ದು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಬಳಿಕ ಆರೋಪಿಗಳು ತಾವು ತಂದಿದ್ದ ಪೆಟ್ರೋಲ್ ಅನ್ನು ಹೊಸ ಕಾರು ಸಹಿತ ಸೋಮಲಿಂಗಪ್ಪನ ಮೇಲೆ ಸುರಿದು ಬೆಂಕಿ ಹಚ್ಚಿದ್ದಾರೆ.
ಒಟ್ಟು 10 ಆರೋಪಿಗಳ ಹೆಸರನ್ನು ಉಲ್ಲೇಖಿಸಿ ಮೃತಪಟ್ಟ ಯುವಕನ ತಾಯಿ ಸಾವಳಗಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಸದ್ಯಕ್ಕೆ ಐವರನ್ನು ಅರೆಸ್ಟ್ ಮಾಡಿದ್ದಾರೆ.
ಕೊಲೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಮೇಲ್ನೋಟಕ್ಕೆ ಅನೈತಿಕ ಸಂಬಂಧದ ಹಿನ್ನೆಲೆಯಲ್ಲಿ ಸಂಬಂಧಿಕರೇ ಹೊಂಚು ಹಾಕಿ ಕೊಲೆ ಮಾಡಿರುವುದಾಗಿ ತಿಳಿದು ಬಂದಿದೆ ಎಂದು ಪೊಲೀಸರು ಪ್ರಕಟಣೆ ಮೂಲಕ ತಿಳಿಸಿದ್ದಾರೆ.




