ಇಳಕಲ್:-ಭಾರಿ ಪ್ರಮಾಣದ ಈ ಅವ್ಯವಹಾರಗಳಲ್ಲಿ ತಾಲೂಕಿನ ಶಿಶು ಅಭಿವೃದ್ಧಿ ಯೋಜನೆ ಅಧಿಕಾರಿಗಳು, ಸಹಾಯಕ ಶಿಶು ಅಭಿವೃದ್ಧಿ ಯೋಜನೆ ಅಧಿಕಾರಿಗಳು, ಮೇಲ್ವಿಚಾರಕರು ಹಾಗೂ ಇತರರು ಶಾಮೀಲಾಗಿದ್ದಾರೆ ಎಂದು ವರದಿ ಮಾಡಲಾಗಿದೆ.
ಅಂಗನವಾಡಿ ಕೇಂದ್ರಗಳಲ್ಲಿ ಮಕ್ಕಳ ಫಲಾನುಭವಿಗಳ ಸಂಖ್ಯೆಯನ್ನು ಹೆಚ್ಚಿಗೆ ತೋರಿಸುವುದು, ಅಂಗನವಾಡಿ ಕೇಂದ್ರಗಳಿಗೆ ಬರುವ ಆಹಾರ ಪದಾರ್ಥಗಳನ್ನು ಮಾರಿಕೊಳ್ಳುವುದು ಸೇರಿದಂತೆ ಹಲವಾರು ಅವ್ಯವಹಾರಗಳು ನಡೆದಿದ್ದರೂ ಇಲಾಖೆಯ ಅಧಿಕಾರಿಗಳು ಮೌನವಾಗಿದ್ದಾರೆ.
ಮುಖ್ಯವಾಗಿ ಅಂಗನವಾಡಿ ಕೇಂದ್ರಗಳನ್ನು ನಡೆಸಲು ಬಾಡಿಗೆ ಪಡೆದಿರುವ ಕಟ್ಟಡಗಳ ಬಾಡಿಗೆ ಪಾವತಿ ನಿಯಮಾನುಸಾರ ಕಟ್ಟಡಗಳ ಮಾಲೀಕರ ಬ್ಯಾಂಕ್ ಖಾತೆಗೆ ಪಾವತಿ ಆಗುತ್ತಿಲ್ಲ.ಅಂಗನವಾಡಿ ಕಾರ್ಯಕರ್ತರು ನಕಲಿ ದಾಖಲೆಗಳನ್ನು ಸೃಷ್ಟಿಸಿ ಅವುಗಳನ್ನು ನೋಟರಿ ಮಾಡಿಸಿದ್ದಾರೆ. ಬಾಡಿಗೆ ಕಟ್ಟಡಗಳ ಒಪ್ಪಂದದ ಕರಾರು ಪ್ರತಿಗೆ ಕಟ್ಟಡ ಮಾಲೀಕರ ಸಹಿ ಇಲ್ಲ. ಕೆಲವು ಪ್ರಕರಣಗಳಲ್ಲಿ ಕೊಟ್ಟಿ ಸಹಿ ಮಾಡಲಾಗಿದೆ.
ಇಂಥ ಕೊಟ್ಟಿ ಬಾಡಿಗೆ ಕರಾರು ಪತ್ರಗಳನ್ನು ಅಂಗೀಕರಿಸಿ ಮೇಲ್ವಿಚಾರಕರು, ಶಿಶು ಅಭಿವೃದ್ಧಿ ಯೋಜನೆ ಅಧಿಕಾರಿಗಳು ಕಟ್ಟಡಗಳಿಗೆ ಬಾಡಿಗೆ ಪಾವತಿಸಿದ್ದಾರೆ. ಅಂಗನವಾಡಿ ಕಾರ್ಯಕರ್ತರ ಈ ಅವ್ಯವಹಾರದಲ್ಲಿ ಅಧಿಕಾರಿಗಳು ಶಾಮಿಲ್ ಆಗಿರುವುದು ಸ್ಪಷ್ಟವಾಗಿದೆ ಎಂದು ವರದಿ ಮಾಡಲಾಗಿದೆ.
ಇಳಕಲ್ ನಗರದ ಅಂಗನವಾಡಿ ಕೇಂದ್ರಗಳು ಸಮಯಾನುಸಾರ ನಡೆಯುತ್ತಿಲ್ಲ. ಬಹುತೇಕ ಅಂಗನವಾಡಿ ಕೇಂದ್ರಗಳಲ್ಲಿ ಬಾಲ ವಿಕಾಸ ಸಮಿತಿಗಳು ಇಲ್ಲ. ಫಲಾನುಭವಿ ಮಕ್ಕಳಿಗೆ ಮೆನು ಪ್ರಕಾರ ಆಹಾರ ವಿತರಣೆಯಾಗುತ್ತಿಲ್ಲ. ಅಂಗನವಾಡಿ ಕಾರ್ಯಕರ್ತರು ಅಂಗನವಾಡಿ ಕೇಂದ್ರಗಳಲ್ಲಿ ಇರುವುದಿಲ್ಲ. ಅಂಗನವಾಡಿ ಕೇಂದ್ರಗಳನ್ನು ಸಮರ್ಪಕವಾಗಿ ನಡೆಸುವಂತೆ ಆಗ್ರಹಗಳು ಕೇಳಿ ಬರುತ್ತಿದ್ದರೂ ತಾಲೂಕಿನ ಶಿಶು ಅಭಿವೃದ್ಧಿ ಯೋಜನೆ ಅಧಿಕಾರಿಗಳು ನಿರ್ಲಕ್ಷ್ಯ ಮುಂದುವರಿಸಿದ್ದನ್ನು ಇಲ್ಲಿ ಸ್ಮರಿಸಬಹುದು.
ವರದಿ:- ದಾವಲ್ ಶೇಡಂ