ತುರುವೇಕೆರೆ: ಪರಿಸರ ದಿನಾಚರಣೆ ಕೇವಲ ಒಂದು ದಿನಕ್ಕೆ ಸೀಮಿತವಾಗದೆ 365 ದಿನವೂ ಪರಿಸರ ದಿನವಾಗಿ, ಪ್ರಕೃತಿ ಉಳಿಸುವ ಕೆಲಸವಾಗಬೇಕಿದೆ ಎಂದು ಸಿವಿಲ್ ನ್ಯಾಯಾಧೀಶ ಬಿ.ಸಿ. ದೀಪು ತಿಳಿಸಿದರು.
ಪಟ್ಟಣದ ನ್ಯಾಯಾಲಯ ಆವರಣದಲ್ಲಿಂದು ಕಾನೂನು ಸೇವಾ ಸಮಿತಿ, ವಕೀಲರ ಸಂಘ, ಅರಣ್ಯ ಇಲಾಖೆ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ ಪರಿಸರ ದಿನಾಚರಣೆ ಕಾರ್ಯಕ್ರಮವನ್ನು ಸಸಿ ನೆಡುವ ಮೂಲಕ ಚಾಲನೆ ನೀಡಿದ ಅವರು, ಪ್ರತಿಯೊಬ್ಬ ನಾಗರೀಕರು ತಮ್ಮ ಮನೆಯ ಆವರಣದಲ್ಲಿ ಸಸಿ ನೆಟ್ಟು ಬೆಳೆಸಿ ಪೋಷಿಸಬೇಕು. ಮುಂದಿನ ಪೀಳಿಗೆಗೆ ಪ್ರಕೃತಿಯನ್ನು ಉತ್ತಮ ರೀತಿಯಲ್ಲಿ ಉಳಿಸುವ ಜವಾಬ್ದಾರಿ ನಮ್ಮೆಲ್ಲರದ್ದಾಗಿದೆ. ಈ ನಿಟ್ಟಿನಲ್ಲಿ ಎಲ್ಲರೂ ಪರಿಸರ ಸಂರಕ್ಷಣೆಗೆ ಮುಂದಾಗಬೇಕಿದೆ ಎಂದರು.
ವಕೀಲ ಡಿ.ಟಿ.ರಾಜಶೇಖರ್ ಮಾತನಾಡಿ, ದೇಶದ ಭೂಪ್ರದೇಶದಲ್ಲಿ ಜೀವ ಸಂಕುಲ ಸುರಕ್ಷಿತವಾಗಿ ಬದುಕಬೇಕೆಂದರೆ ಶೇ.33 ರಷ್ಟು ಕಾಡು ಇರಬೇಕೆಂದಿದೆ. ಆದರೆ ಪ್ರಸ್ತುತ ಶೇ.18 ರಷ್ಟು ಮಾತ್ರ ದೇಶದಲ್ಲಿದೆ. ಜೀವ ಸಂಕುಲ ಸಂರಕ್ಷಣೆಗೆ ಪ್ರಕೃತಿ ಉಳಿಸಬೇಕಾದ ಅಗತ್ಯತೆಯಿದೆ. ದುರ್ಬುದ್ದಿ, ಸ್ವಾರ್ಥತೆ ಹಾಗೂ ಅಭಿವೃದ್ದಿಯ ಹೆಸರಿನಲ್ಲಿ ಕಾಡನ್ನು ಕಡಿದು ಹಾಕುತ್ತಿದ್ದೇವೆ. ಕಾಡು ನಶಿಸಿದರೆ ನಾಡು ನಾಶವಾಗುತ್ತದೆ. ಮುಂದಿನ ಪೀಳಿಗೆಗೆ ಉತ್ತಮ ಪರಿಸರವೇ ಇಲ್ಲದಂತಹ ಸ್ಥಿತಿಯನ್ನು ನಾವು ನಿರ್ಮಾಣ ಮಾಡುತ್ತಿದ್ದೇವೆ. ಆದ್ದರಿಂದ ಮುಂದಿನ ಪೀಳಿಗೆ ಹಾಗೂ ಜೀವ ಸಂಕುಲಗಳು ಈ ಭೂಮಿಯಲ್ಲಿ ಜೀವಿಸಬೇಕಾದರೆ ಪ್ರಕೃತಿಯ ಉಳಿಸಬೇಕಿದೆ, ಈ ಕಾರ್ಯಕ್ಕೆ ಪ್ರತಿಯೊಬ್ಬರೂ ಕೈಜೋಡಿಸಬೇಕಿದೆ ಎಂದರು.
ಈ ಸಂದರ್ಭದಲ್ಲಿ ವಕೀಲರ ಸಂಘದ ಅಧ್ಯಕ್ಷ ನಟರಾಜ್, ಉಪಾಧ್ಯಕ್ಷ ನಂಜೇಗೌಡ, ಸಹಕಾರ್ಯದರ್ಶಿ ಈಶ್ವರ್, ಸರ್ಕಾರಿ ವಕೀಲರಾದ ಕವಿತಾ ಹಿರೇಮಠ, ಶಿವಬಸಪ್ಪ ಹುಕ್ಕೇರಿ, ವಕೀಲರಾದ ಶೇಖರಪ್ಪ, ಹರೀಶ್, ನಂದೀಶ್, ಸುಷ್ಮ, ಜಗನ್ನಾಥ್, ಸಾಮಾಜಿಕ ವಲಯ ಅರಣ್ಯಾಧಿಕಾರಿ ಲಿಂಗರಾಜು, ಉಪವಲಯ ಅರಣ್ಯಾಧಿಕಾರಿ ತಿಪ್ಪೇಶ್, ಪ್ರಾದೇಶಿಕ ಅರಣ್ಯವಲಯದ ಗಸ್ತು ಅರಣ್ಯಪಾಲಕ ರೂಪೇಶ್, ಪ್ರದೀಪ್, ಸಿಬ್ಬಂದಿಗಳಾದ ಹೇಮಂತ್, ಮಣಿಕಂಠ ಉಪಸ್ಥಿತರಿದ್ದರು.
ವರದಿ: ಗಿರೀಶ್ ಕೆ ಭಟ್




