ಬೆಂಗಳೂರು: ಪವನ ವಿದ್ಯುತ್ ಉತ್ಪಾದನೆಯಲ್ಲಿ ಕರ್ನಾಟಕಕ್ಕೆ ಮೊದಲ ಸ್ಥಾನ ಲಭಿಸಿದೆ. ಬರೋಬ್ಬರಿ 1331.48 ಮೆಗಾವ್ಯಾಟ್ ಪವನ ವಿದ್ಯುತ್ ಸಾಮರ್ಥ್ಯ ಸಾಧಿಸಿದ ಮೊದಲ ರಾಜ್ಯ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
ಬೆಂಗಳೂರಿನಲ್ಲಿ ಭಾನುವಾರ ಆಯೋಜಿಸಿದ್ದ ‘ಗ್ಲೋಬಲ್ ವಿಂಡ್ ಡೇ’ 2025 “ಪವನ್-ಉರ್ಜಾ: ಪವರಿಂಗ್ ದಿ ಫ್ಯೂಚರ್ ಆಫ್ ಇಂಡಿಯಾ” ಸಮಾರಂಭದಲ್ಲಿ ಕೇಂದ್ರ ನವ ಮತ್ತು ನವೀಕರಿಸಬಹುದಾದ ಇಂಧನ ಸಚಿವ ಪ್ರಲ್ಹಾದ್ ಜೋಶಿ ಅವರಿಂದ ಇಂಧನ ಸಚಿವ ಕೆ.ಜೆ.ಜಾರ್ಜ್ ಅವರು ಪ್ರಶಸ್ತಿ ಸ್ವೀಕರಿಸಿದರು.
2024-25ನೇ ಸಾಲಿನಲ್ಲಿ ಪವನ ವಿದ್ಯುತ್ ವಲಯಕ್ಕೆ 1331.48 ಮೆ.ವ್ಯಾ. ಸಾಮರ್ಥ್ಯ ಸೇಪರ್ಡೆಗೊಳಿಸಿರುವ ರಾಜ್ಯ ಪ್ರಥಮ ಸ್ಥಾನದಲ್ಲಿದ್ದರೆ, 1136.37 ಮೆ.ವ್ಯಾ. ಸಾಮರ್ಥ್ಯವನ್ನು ಸೇರ್ಪಡೆಗೊಳಿಸಿರುವ ತಮಿಳುನಾಡು ಎರಡನೇ ಸ್ಥಾನದಲ್ಲಿದೆ. 954.74 ಮೆ.ವ್ಯಾ ಸೇರ್ಪಡೆಗೊಳಿಸಿರುವ ಗುಜರಾತ್ ಮೂರನೇ ಸ್ಥಾನದಲ್ಲಿದೆ.
ಕಳೆದ ಸಾಲಿನಲ್ಲಿ ಗುಜರಾತ್ ಮೊದಲ ಸ್ಥಾನ, ಕರ್ನಾಟಕ ಎರಡನೇ ಸ್ಥಾನ ಹಾಗೂ ತಮಿಳುನಾಡು ಮೂರನೇ ಸ್ಥಾನದಲ್ಲಿತ್ತು. ಪ್ರಸಕ್ತ ಸಾಲಿನಲ್ಲಿ ಈ ಎರಡೂ ರಾಜ್ಯಗಳನ್ನು ಹಿಂದಿಕ್ಕಿ ಕರ್ನಾಟಕ ಅಗ್ರ ಸ್ಥಾನಕ್ಕೇರಿದೆ.
ವಿಶ್ವ ಪವನ ದಿನದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಇಂಧನ ಸಚಿವ ಕೆ.ಜೆ.ಜಾರ್ಜ್,”2025ರ ಮೇ ವೇಳೆಗೆ ಪವನ ವಿದ್ಯುತ್ತಿನ ಸ್ಥಾಪಿತ ಸಾಮರ್ಥ್ಯ 7,351 ಮೆಗಾವ್ಯಾಟ್‌ನಷ್ಟಿತ್ತು.
ಕಳೆದ ಆರ್ಥಿಕ ಸಾಲಿನಲ್ಲಿ 1,331 ಮೆಗಾವ್ಯಾಟ್‌ಗಳನ್ನು ಸೇರ್ಪಡೆಗೊಳಿಸಿ ದೇಶದಲ್ಲಿ ಅಗ್ರಮಾನ್ಯ ಸ್ಥಾನದಲ್ಲಿದ್ದೇವೆ,” ಎಂದು ತಿಳಿಸಿದರು.